ಮದುವೆಯಲ್ಲಿ ಜಗಳ, ಹೊಡೆದಾಟಗಳು ಈಗ ಹೊಸ ರೂಢಿ ಎಂಬಂತೆ ತೋರುವಷ್ಟು ನಡೆಯುತ್ತಿವೆ. ಸುದ್ದಿ ಮತ್ತು ವೈರಲ್ ವೀಡಿಯೊಗಳಲ್ಲಿ ಮದುವೆ ವೇಳೆ ಆಹಾರದ ಕೊರತೆಯಿಂದ ಹಿಡಿದು ಬಿರಿಯಾನಿಯಲ್ಲಿ ಕೋಳಿ ಮಾಂಸದ ಕೊರತೆ ವರೆಗೂ ವಿವಿಧ ಕಾರಣಗಳಿಗಾಗಿ ಜಗಳ-ವಾಗ್ವಾದ ನೋಡಬಹುದು. ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದ ಇತ್ತೀಚಿನ ಘಟನೆಯೊಂದು ಈ ತರಹದ ಪ್ರವೃತ್ತಿಗಳಿಗೆ ಹೊಸ ಸೇರ್ಪಡೆಯಾಗಿದೆ.
ವಿವಾಹ ಸಮಾರಂಭದಲ್ಲಿ, ಊಟದಲ್ಲಿ ಸ್ವಲ್ಪ ಕೊರತೆಯಾಗಿದ್ದ ವಧು ಮತ್ತು ವರನ ಕುಟುಂಬಗಳ ನಡುವೆ ಜಗಳವಾಗಿ ನಂತರ ಅದು ಹೊಡೆದಾಟಕ್ಕೆ ಪರಿವರ್ತನೆಯಾಗಿ ಮದುವೆಯೇ ನಿಂತು ಹೋಯಿತು. ವಧ-ವರ ಎರಡು ಕಡೆಯವರು ದೊಣ್ಣೆ, ಕುರ್ಚಿ ಸೇರಿದಂತೆ ಕೈಯಲ್ಲಿ ಸಿಕ್ಕಿದ್ದರಲ್ಲಿ ಹೊಡೆದಾಡಿಕೊಂಡಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಕೆಲವರು ಕುರ್ಚಿಗಳನ್ನು ಎಸೆಯುವುದು ಮತ್ತು ದೊಣ್ಣೆ , ರಾಡ್ ಹಿಡಿದು ಹೊಡೆದಾಡುವುದನ್ನು ಕಾಣಬಹುದು. ಮದುವೆಯ ಔತಣದಲ್ಲಿ ಆಹಾರದ ಕೊರತೆಯುಂಟಾಗಿದ್ದೇ ತೀವ್ರವಾದ ಜಗಳಕ್ಕೆ ಕಾರಣ ಎಂದು ಹೇಳಲಾಗಿದೆ. ಮದುವೆಯಲ್ಲಿ ಪಾಲ್ಗೊಂಡ ಅನೇಕರಿಗೆ ಪೀಠೋಪಕರಣಗಳನ್ನು ಎಸೆದಿದ್ದರಿಂದ ಮತ್ತು ಬಡಿದಾಡಿಕೊಂಡಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಎಬಿಪಿ ನ್ಯೂಸ್ ಪ್ರಕಾರ, ಊಟದ ವೇಳೆ ಆಹಾರದ ಕೊರತೆ ಉಂಟಾಗಿ ವರನ ನೇತೃತ್ವದಲ್ಲಿ ವರನ ಕುಟುಂಬವು ವಧುವಿನ ಕುಟುಂಬಕ್ಕೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟಿದೆ ಎಂದು ವಧುವಿನ ಸಹೋದರ ಆರೋಪಿಸಿದ್ದಾರೆ. ಸ್ವಲ್ಪ ಹಣ ನೀಡಲಾಯಿತಾದರೂ ವರನ ಕುಟುಂಬದವರು ಇನ್ನೂ 1 ಲಕ್ಷ ರೂ. ಬೇಕೆಂದು ಹಟ ಹಿಡಿದಿದ್ದರಿಂದ ಜಗಳವು ವಿಕೋಪಕ್ಕೆ ಹೋಯಿತು. ವೈರಲ್ ದೃಶ್ಯಗಳಲ್ಲಿ ಎರಡೂ ಕಡೆಯವರು ದೊಣ್ಣೆ ಮತ್ತು ರಾಡ್‌ಗಳಿಂದ ಹೊಡೆದಾಡಿಕೊಂಡಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮದುವೆಯನ್ನೇ ನಿಲ್ಲಿಸಲಾಯಿತು. ವಧುವಿನ ಕುಟುಂಬವು ಮದುವೆಯಲ್ಲಿ ಪ್ರತಿಜ್ಞಾ ವಿಧಿ ಮಾಡುವ ಕಾರ್ಯಕ್ರಮ ಮಾಡಿಕೊಳ್ಳದೆ ವಧುವನ್ನು ಮನೆಗೆ ಕರೆದೊಯ್ದ ನಂತರ ಮದುವೆ ಸ್ಥಗಿತಗೊಂಡಿತು. ಸಂತೋಷದಿಂದ ನಡೆಯಬೇಕಿದ್ದ ಮದುವೆ ಸಮಾರಂಭವು ಈ ರೀತಿಯಲ್ಲಿ ಮುಕ್ತಾಯವಾಯಿತು.
ಕುತೂಹಲಕಾರಿಯಾಗಿ, ಇದೊಂದೇ ಘಟನೆಯಲ್ಲ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬರೇಲಿಯಲ್ಲಿ, ಅತಿಥಿಗಳು ಬಿರಿಯಾನಿಯಲ್ಲಿ ಚಿಕನ್ ಪೀಸ್ ಕಡಿಮೆ ಇದೇ ಎಂದು ಮದುವೆಯನ್ನೇ ರದ್ದುಗೊಳಿಸಿದ್ದರು. ಎರಡೂ ಕಡೆಯವರು ಪರಸ್ಪರ ಒದೆಯುವುದು, ಗುದ್ದುವುದು ಮತ್ತು ಕುರ್ಚಿಗಳನ್ನು ಎಸೆಯುವ ವರೆಗೆ ತಾರಕಕ್ಕೇರಿತು. ವದಂತಿಯ ಪ್ರಕಾರ ವರ ಸ್ವತಃ ಹೊಡೆದಾಟಕ್ಕೆ ಇಳಿದಿದ್ದ.
ಈ ಘಟನೆಗಳು ಆತಂಕಕಾರಿ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತವೆ, ಮದುವೆಯ ಪಾವಿತ್ರ್ಯತೆ ಮತ್ತು ಸಂತೋಷವು ಸಣ್ಣ ಪುಟ್ಟ ವಿಷಯಗಳಿಂದಾಗಿ ಹೊಡೆದಾಟವಾಗಿ ಮದುವೆಗಳೇ ನಿಲ್ಲುತ್ತಿವೆ. ಮದುವೆಯ ಮೂಲತತ್ವವು ಎರಡು ಕುಟುಂಬಗಳ ಒಗ್ಗೂಡುವುದಾಗಿದೆ. ಆದರೆ ಇದಕ್ಕೆ ತದ್ವಿರುದ್ಧ ಘಟನೆಗಳು ನಡೆಯುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ