ರೀಲ್ಸ್‌ ವೇಳೆ ಬೆಳೆದ ಪ್ರೀತಿ- ಪ್ರೇಮ, ನಂತರ ಮದುವೆ ; ಈಗ ಗರ್ಭಿಣಿಯ ಅನುಮಾನಾಸ್ಪದ ಸಾವು

ಬೆಳಗಾವಿ : ರೀಲ್ಸ್‌ ಮೂಲಕ ಹೆಸರಾಗಿದ್ದ ಮೈಸೂರು ಮೂಲದ ಗರ್ಭಿಣಿಯನ್ನು ಆಕೆಯ ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಗರ್ಭಿಣಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿ ಹಾಗೂ ಅವನ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಮೈಸೂರಿನ ಮಂಜುಳಾ ಅಲಿಯಾಸ್ ನಯನಾ (22)ಮೃತ ಗರ್ಭಿಣಿ. ಮಂಜುಳಾ ಮೂಲತಃ ಮೈಸೂರು ಕುಂಬಾರ ಕೊಪ್ಪಲಿನ ನಿವಾಸಿ. ಸಾಮಾಜಿಕ ಜಾಲತಾಣವಾದ ಇನ್ಟ್ರಾಗ್ರಾಮ್ ದಲ್ಲಿ ರೀಲ್ಸ್ ಮಾಡುವ ವೇಳೆ ಪರಸ್ಪರ ಪರಿಚಯವಾಗಿ ಆಕೆಗೆ ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಬೋರೇಶ ಜೊತೆ ಪ್ರೇಮ ಬೆಳೆದಿತ್ತು. ನಂತರ ಆಕೆಯ ಮನೆಯವರ ತೀವ್ರ ವಿರೋಧದ ನಡುವೆ ಮಂಜುಳಾ ಒಂದೂವರೆ ವರ್ಷದ ಹಿಂದೆ ಮನೆ ಬಿಟ್ಟು ಬಂದು ಬೋರೇಶನೊಂದಿಗೆ ವಿವಾಹವಾಗಿದ್ದಳು. ಮಂಜುಳಾ ಕುಟುಂಬಸ್ಥರು ಬೆಳಗಾವಿಗೆ ಆಗಮಿಸಿ ಆಕೆಯನ್ನು ಮತ್ತೆ ಊರಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಂಜುಳಾ ಮತ್ತೆ ಬೆಳಗಾವಿಯ ಮಚ್ಚೆಗೆ ಬಂದು ಗಂಡನೊಂದಿಗೆ ವಾಸವಾಗಿದ್ದಳು. ಆರಂಭದಲ್ಲಿ ಎಲ್ಲಾ ಪ್ರೀತಿ-ಪ್ರೇಮದಂತೆ ಇವರಿಬ್ಬರ ನಡುವೆ ಸುಂದರ ದಾಂಪತ್ಯ ನಡೆದಿತ್ತು. ಆದರೆ, ದಿನ ಕಳೆದಂತೆ ಇಬ್ಬರ ನಡುವೆ ಮನಸ್ತಾಪ ಮೂಡಿ ಇದೀಗ ಆಕೆಯ ದಾರುಣ ಸಾವಿಗೆಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಮೂರು ತಿಂಗಳ ಗರ್ಭಿಣಿಯಾಗಿದ್ದ ಮಂಜುಳಾ ಶುಕ್ರವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ನಂತರ ಪತಿ ಬೋರೇಶ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ರೋಹನ್ ಜಗದೀಶ, ಮಂಜುಳಾಗೆ ಮೊದಲಿನಿಂದಲೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಬಗ್ಗೆ ಆಕೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಪತಿ ಹಾಗೂ ಮನೆಯವರು ಕೊಲೆ ಮಾಡಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿರುವುದಾಗಿ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು ಇದನ್ನು ಅನುಮಾನಾಸ್ಪದ ಸಾವಿನ ಪ್ರಕರಣ ಎಂದು ತನಿಖೆ ನಡೆಸಲಾಗುತ್ತಿದೆ. ಮದುವೆಯಾಗಿ ಏಳು ವರ್ಷದೊಳಗೆ ಮಹಿಳೆ ಮೃತಪಟ್ಟರೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement