ಸ್ಥಳೀಯ ಹಕ್ಕುಗಳ ಲಾಭರಹಿತ ಸಂಸ್ಥೆ ಸರ್ವೈವಲ್ ಇಂಟರ್ನ್ಯಾಷನಲ್ ನಿಂದ ಪಡೆದ ಗಮನಾರ್ಹವಾದ ಅಪರೂಪದ ಚಿತ್ರಗಳು ಮತ್ತು ವೀಡಿಯೊಗಳು ಈವರೆಗೆ ನಾಗರಿಕ ಸಂಪರ್ಕಕ್ಕೇ ಬಾರದ ಸ್ಥಳೀಯ ಬುಡಕಟ್ಟು ಜನಾಂಗದ ದೈನಂದಿನ ದಿನಚರಿಯನ್ನು ತೋರಿಸುತ್ತವೆ, ಇದು ಮರ ಕಟಾವ್ ಮಾಡುವ ಪ್ರದೇಶಕ್ಕೆ “ಅಪಾಯಕಾರಿಯಾಗಿ ಹತ್ತಿರದಲ್ಲಿದೆ” ಎಂದು ವರದಿ ಹೇಳಿದೆ.
ಪೆರುವಿನ ಮಾಶ್ಕೊ ಪಿರೊ ಬುಡಕಟ್ಟು 50 ಕ್ಕೂ ಹೆಚ್ಚು ಸದಸ್ಯರು ಇರುವ ಜನ ಸಂಪರ್ಕವೇ ಇಲ್ಲದ ವಿಶ್ವದ ಅತಿದೊಡ್ಡ ಬುಡಕಟ್ಟು ಎಂದು ನಂಬಲಾಗಿದೆ. ಈ ಬುಡಕಟ್ಟು ಗುಂಪು ಮೊಂಟೆ ಸಾಲ್ವಾಡೊದ ʼಯಿನ್ʼ ಗ್ರಾಮದ ಬಳಿ ಲಾಸ್ ಪೈಡ್ರಾಸ್ ನದಿಯಲ್ಲಿ ಕಾಣಿಸಿಕೊಂಡಿದೆ. ಮಂಗಳವಾರ ಸರ್ವೈವಲ್ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿದ ಚಿತ್ರಗಳು, ಹಲವಾರು ಬುಡಕಟ್ಟು ಸದಸ್ಯರು ನದಿಯ ದಡದಲ್ಲಿ ವಿಹರಿಸುತ್ತಿರುವುದು ಹಾಗೂ ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸುತ್ತವೆ. ಮಾಶ್ಕೊ ಪಿರೊ (Mashco Piro) ಬುಡಕಟ್ಟು ಯೋಗಕ್ಷೇಮದ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ಈ ದೃಶ್ಯ ಕಂಡುಬಂದಿದೆ.
ಸ್ಥಳೀಯ ಹಕ್ಕುಗಳ ಗುಂಪು ಫೆನಾಮಡ್ ಪ್ರಕಾರ, ಈ ಪ್ರದೇಶದಲ್ಲಿ ಹೆಚ್ಚಿದ ಲಾಗಿಂಗ್ (ಮರ ಕಟಾವ್ ಮಾಡುವ) ಚಟುವಟಿಕೆಯು ಬುಡಕಟ್ಟು ಜನಾಂಗವನ್ನು ಅವರ ಸಾಂಪ್ರದಾಯಿಕ ಭೂಮಿ ಹಾಗೂ ಮೂಲ ನೆಲೆಯಿಂದ ಹೊರಗೆ ತಳ್ಳುತ್ತಿದೆ. ಹೀಗಾಗಿ ಮಾಶ್ಕೊ ಪಿರೊ (Mashco Piro)ಗಳು ಆಹಾರ ಮತ್ತು ಸುರಕ್ಷಿತ ಆಶ್ರಯದ ಹುಡುಕಾಟದಲ್ಲಿ ವಸಾಹತುಗಳಿಗೆ ಹತ್ತಿರವಾಗಬಹುದು.
ಬ್ರೆಜಿಲ್ನ ಗಡಿಯಲ್ಲಿರುವ ಆಗ್ನೇಯ ಪೆರುವಿಯನ್ ಪ್ರಾಂತ್ಯದ ಮ್ಯಾಡ್ರೆ ಡಿ ಡಿಯೋಸ್ನ ನದಿಯ ದಡದ ಬಳಿ ಜೂನ್ ಅಂತ್ಯದಲ್ಲಿ ಈ ಫೋಟೋಗಳನ್ನು ತೆಗೆಯಲಾಗಿದೆ ಎಂದು ಸರ್ವೈವಲ್ ಇಂಟರ್ನ್ಯಾಶನಲ್ ವರದಿ ಮಾಡಿದೆ. ಈ ಬುಡಕಟ್ಟು ಜನಾಂಗ ಆಹಾರದ ಹುಡುಕಾಟದಲ್ಲಿ ಅಲೆದಾಡುತ್ತ ನದಿಗೆ ಬಂದಾಗ ಈ ಚಿತ್ರಗಳು ಸೆರೆ ಹಿಡಿಲ್ಪಟ್ಟಿವೆ. ಈ ಚಿತ್ರಗಳು ಮಾಸ್ಕೋ ಪಿರೋ ಜನರ ದೈನಂದಿನ ಜೀವನದ ಬೆರಗುಗೊಳಿಸುವ ಹಾಗೂ ಈವರೆಗೆ ಕಾಣದ ಒಳನೋಟವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ʼ ಅಮೆಜಾನ್ ಮಳೆ ಕಾಡಿನಲ್ಲಿ ಮರದ ದಿಮ್ಮಿಗಳನ್ನು ಕಟ್ ಮಾಡುವ ಕಾರ್ಯಾಚರಣೆ ಪ್ರಾರಂಭಿಸಲಿರುವ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರತ್ಯೇಕವಾಗಿರುವ ಮ್ಯಾಶ್ಕೊ ಪಿರೋಗಳು ಜನಸಂಪರ್ಕವಿಲ್ಲದೆ ವಾಸಿಸುತ್ತಿದ್ದಾರೆ ಎಂದು ಈ ಚಿತ್ರಗಳು ತೋರಿಸುತ್ತವೆ” ಎಂದು ಸರ್ವೈವಲ್ ಇಂಟರ್ನ್ಯಾಷನಲ್ ನಿರ್ದೇಶಕಿ ಕ್ಯಾರೋಲಿನ್ ಪಿಯರ್ಸ್ ಹೇಳಿದ್ದಾರೆ.
ಮಾಂಟೆ ಸಾಲ್ವಾಡೊ ಎಂಬ ಯಿನ್ ಜನರ ಹಳ್ಳಿಯ ಬಳಿ ಇತ್ತೀಚಿನ ದಿನಗಳಲ್ಲಿ 50 ಕ್ಕೂ ಹೆಚ್ಚು ಮ್ಯಾಶ್ಕೊ ಪಿರೋ ಜನರು ಕಾಣಿಸಿಕೊಂಡಿದ್ದರು. 17 ಜನರ ಮತ್ತೊಂದು ಗುಂಪು ಪೋರ್ಟೊ ನ್ಯೂವೊ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯ ಹಕ್ಕುಗಳನ್ನು ರಕ್ಷಿಸುವ ಎನ್ಜಿಒ (NGO) ಹೇಳಿದೆ.
ಸರ್ವೈವಲ್ ಇಂಟರ್ನ್ಯಾಷನಲ್ ಪ್ರಕಾರ, ಮಡ್ರೆ ಡಿ ಡಿಯೋಸ್ನಲ್ಲಿ ಎರಡು ನೈಸರ್ಗಿಕ ಕಾಯ್ದಿಟ್ಟ ಪ್ರದೇಶಗಳ ನಡುವಿನ ಪ್ರದೇಶದಲ್ಲಿ ವಾಸಿಸುವ ಮಾಶ್ಕೊ ಪಿರೋ ಬುಡಕಟ್ಟು ಜನರು ಅಪರೂಪವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಯಿನ್ ಹಳ್ಳಿಯ ಜನರು ಅಥವಾ ಯಾರೊಂದಿಗೂ ಸಂವಹನ ನಡೆಸುವುದಿಲ್ಲ.
ಹಲವಾರು ಲಾಗಿಂಗ್ ಕಂಪನಿಗಳು ಮ್ಯಾಶ್ಕೊ ಪಿರೋ ಜನರು ವಾಸಿಸುವ ಪ್ರದೇಶದೊಳಗೆ ಮರದ ದಿಮ್ಮಿಗಳನ್ನು ಕಟಾವ್ ಮಾಡಲು ರಿಯಾಯಿತಿಗಳನ್ನು ಪಡೆದಿವೆ. ಸರ್ವೈವಲ್ ಇಂಟರ್ನ್ಯಾಶನಲ್ ಪ್ರಕಾರ, ಒಂದು ಕಂಪನಿ, ಕೆನಲ್ಸ್ ತಹುಮಾನು, ಕಡಿದ ಮರವನ್ನು ಹೊರತೆಗೆದು ಅಲ್ಲಿಂದ ಸಾಗಿಸಲು ತನ್ನ ಟ್ರಕ್ಗಳನ್ನು ಒಯ್ಯಲು 200 ಕಿಲೋಮೀಟರ್ಗಳಿಗಿಂತ ಹೆಚ್ಚು (120 ಮೈಲುಗಳು) ರಸ್ತೆಗಳನ್ನು ನಿರ್ಮಿಸಿದೆ. ಲಿಮಾದಲ್ಲಿನ ಕ್ಯಾನಲ್ಸ್ ತಹುಮಾನು ಪ್ರತಿನಿಧಿಯು ಕಾಮೆಂಟ್ಗಾಗಿ ವಿನಂತಿಗೆ ಪ್ರತಿಕ್ರಿಯಿಸಲಿಲ್ಲ ಎಂದು ವರದಿ ಹೇಳಿದೆ. ಕಂಪನಿಯು ಫಾರೆಸ್ಟ್ ಸ್ಟೀವರ್ಡ್ಶಿಪ್ ಕೌನ್ಸಿಲ್ನಿಂದ ಪ್ರಮಾಣೀಕರಿಸಲ್ಪಟ್ಟಿದೆ, ಅದರ ಪ್ರಕಾರ ಇದು ಸೀಡರ್ ಗಳನ್ನು ಹೊರತೆಗೆಯಲು ಮ್ಯಾಡ್ರೆ ಡಿ ಡಿಯೋಸ್ನಲ್ಲಿ 53,000 ಹೆಕ್ಟೇರ್ (130,000 ಎಕರೆ) ಕಾಡುಗಳನ್ನು ಹೊಂದಿದೆ.
ಜೂನ್ 28 ರಂದು ಮಡ್ರೆ ಡಿ ಡಿಯೋಸ್ನ ರಾಜಧಾನಿ ಪೋರ್ಟೊ ಮಾಲ್ಡೊನಾಡೊ ನಗರದಿಂದ 150 ಕಿಲೋಮೀಟರ್ (93 ಮೈಲುಗಳು) ದೂರದಲ್ಲಿರುವ ಲಾಸ್ ಪೀಡ್ರಾಸ್ ನದಿಯಲ್ಲಿ ಮಾಶ್ಕೊ ಪಿರೊವನ್ನು ನೋಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ಪೆರುವಿಯನ್ ಸರ್ಕಾರ ಹೇಳಿದೆ.
ಬ್ರೆಜಿಲ್ನ ಗಡಿಯುದ್ದಕ್ಕೂ ಮ್ಯಾಶ್ಕೊ ಪಿರೊ ಜನರು ಕಾಣಿಸಿಕೊಂಡಿದ್ದಾರೆ ಎಂದು ಎಕ್ರೆ ರಾಜ್ಯದಲ್ಲಿ ಬ್ರೆಜಿಲಿಯನ್ ಕ್ಯಾಥೊಲಿಕ್ ಬಿಷಪ್ಗಳ ಸ್ಥಳೀಯ ಮಿಷನರಿ ಕೌನ್ಸಿಲ್ನಲ್ಲಿ ರೋಸಾ ಪಡಿಲ್ಹಾ ಹೇಳಿದ್ದಾರೆ. ವರ್ಷದ ಈ ಸಮಯದಲ್ಲಿ, ಅವರು (ಮ್ಯಾಶ್ಕೊ ಪಿರೊ) ಟ್ರಾಕಾಜಾ (ಅಮೆಜಾನ್ ಆಮೆ) ಮೊಟ್ಟೆಗಳನ್ನು ತೆಗೆದುಕೊಳ್ಳಲು ಕಡಲತೀರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗ ನಾವು ಮರಳಿನ ಮೇಲೆ ಅವರ ಹೆಜ್ಜೆಗುರುತುಗಳನ್ನು ಕಾಣುತ್ತೇವೆ. ಅವರು ಬಹಳಷ್ಟು ಆಮೆ ಚಿಪ್ಪುಗಳನ್ನು ಬಿಟ್ಟು ಹೋಗುತ್ತಾರೆ ” ಎಂದು ಕ್ಯಾರೋಲಿನ್ ಪಿಯರ್ಸ್ ಹೇಳುತ್ತಾರೆ.
ಸ್ಥಳೀಯ ಬುಡಕಟ್ಟಿಗೆ ಲಾಗರ್ಸ್ “ಅಪಾಯಕಾರಿಯಾಗಿ ನಿಕಟ” ಸಾಮೀಪ್ಯದಿಂದಾಗಿ ತಜ್ಞರು ಮತ್ತು ಅಧಿಕಾರಿಗಳು ಎಚ್ಚರಿಕೆಯನ್ನು ಧ್ವನಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರ ಭೂಮಿಯಲ್ಲಿ ಮರಗಳನ್ನು ಕಡಿಯುವುದರ ಜೊತೆಗೆ, ಲಾಗರ್ಸ್ ಸಮುದಾಯವನ್ನು ಕೊಲ್ಲುವ ರೋಗಗಳನ್ನು ಹರಡುವ ಅಪಾಯವೂ ಇದೆ ಎನ್ನುತ್ತಾರೆ ಅವರು.
“ಲಾಗರ್ಗಳನ್ನು ಹೊರಹಾಕುವುದು ಅತ್ಯಗತ್ಯ, ಮತ್ತು ಆದರೆ ಮ್ಯಾಶ್ಕೊ ಪಿರೋಗಳು ಇರುವ ಪ್ರದೇಶವನ್ನು ಅಂತಿಮವಾಗಿ ಸರಿಯಾಗಿ ರಕ್ಷಿಸಬೇಕು. ಎಫ್ಎಸ್ಸಿ ಕಂಪನಿ ತನ್ನ ಕ್ಯಾನೆಲ್ಸ್ ತಹುಮಾನು ಪ್ರಮಾಣೀಕರಣವನ್ನು ತಕ್ಷಣವೇ ರದ್ದುಗೊಳಿಸಬೇಕು. ಅದು ಹಾಗೆ ಮಾಡಲು ವಿಫಲವಾದರೆ ಸಂಪೂರ್ಣ ಪ್ರಮಾಣೀಕರಣ ವ್ಯವಸ್ಥೆಯನ್ನು ಅದು ಅಪಹಾಸ್ಯ ಮಾಡುತ್ತದೆ ಎಂದು ಪಿಯರ್ಸ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ