ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವವನ್ನು ಪತ್ತೆಹಚ್ಚಲು ಸುರತ್ಕಲ್ ನಿಂದ ರಾಡಾರ್ ಯಂತ್ರದೊಂದಿಗೆ ಆಗಮಿಸಿರುವ ತಜ್ಞರ ತಂಡ ಪತ್ತೆಕಾರ್ಯ ನಡೆಸುತ್ತಿದೆ.
ಅಲ್ಲದೆ, ಕೇರಳದಿಂದ ಆಗಮಿಸಿರುವ ಪರಿಣಿತ ರಕ್ಷಣಾ ಕಾರ್ಯಕರ್ತರ ತಂಡ ಕೂಡಾ ಈ ಪ್ರದೇಶದಲ್ಲಿ ವ್ಯಾಪಕ ಪರಿಶೀಲನೆ ನಡೆಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಸಮೀಪದ ನದಿಯಲ್ಲಿಯೂ ಹುಡುಕಾಟ ನಡೆಯುತ್ತಿದೆ.
ಜಿಲ್ಲೆಯಲ್ಲಿ ಭಾನುವಾರ (ಜುಲೈ 21) ವಿಪರೀತ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಗುಡ್ಡ ಕುಸಿತ ಮತ್ತು ಇತರೇ ಅಪಾಯಕಾರಿ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ಅಥವಾ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯ ಹೆದ್ದಾರಿ ಪ್ರದೇಶದಲ್ಲಿ ಗುಡ್ಡ ಕುಸಿತಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ ವಾಹನ ಸವಾರರು ಸಂಚಾರ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು ಜಿಲ್ಲೆಯ ನೆರೆ ಪರಿಸ್ಥಿತಿಯ ಕುರಿತಂತೆ 24*7 ಪರಿಶೀಲಿಸಲಾಗುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಸಹ ಕಾರ್ಯಾಚರಣೆ ಮಾಡಲು ಈಗಾಗಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 2 ಮನೆಗಳು ಪೂರ್ಣ ಹಾನಿ, 2 ಮನೆಗಳು ತೀವ್ರ ಹಾನಿ, 49 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 28 ಕಾಳಜಿ ಕೇಂದ್ರಗಳಲ್ಲಿ 1558 ಮಂದಿಗೆ ಆಶ್ರಯ ಒದಗಿಸಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾ ವಿಪತ್ತು ತುರ್ತು ಸಹಾಯವಾಣಿ ಸಂಖ್ಯೆ-1077/9483511015 ಗೆ ಸಂರ್ಪಕಿಸಬಹುದು ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ