ಬೆಳಗಾವಿ: ನಾಯಿಗಳು ಅತ್ಯಂತ ನಂಬಿಕಸ್ಥ ಮತ್ತು ಮಾಲೀಕರಿಗೆ ವಿಧೇಯವಾಗಿರುವ ಪ್ರಾಣಿ. ಅವುಗಳ ವಾಸನಾ ಶಕ್ತಿಯೂ ಅದ್ಭುತ. ಅವುಗಳನ್ನು ಎಲ್ಲಿಯೇ ಬಿಟ್ಟು ಬಂದರೂ ನಾಯಿ ಮತ್ತೆ ಮನೆಯನ್ನು ಹುಡುಕಿಕೊಂಡು ಬಂದ ಸಾಕಷ್ಟು ಉದಾರಹರಣೆಗಳಿವೆ. ಇಂತಹದ್ದೇ ಒಂದು ಅಚ್ಚರಿಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಸುಮಾರು 200 ಕಿಮೀ ದೂರದಲ್ಲಿ ಕಳೆದುಹೋಗಿದ್ದ ನಾಯಿ ನಾಲ್ಕು ದಿನಗಳ ನಂತರ ಬಳಿಕ ತಾನಾಗಿಯೇ ಮನೆಯನ್ನು ಹುಡುಕಿಕೊಂಡು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಷ್ಟು ದೂರದಿಂದ ಅದು ನಡೆದುಕೊಂಡು ಬಂದು ಅದು ನಿಖರವಾದ ಜಾಗಕ್ಕೆ ವಾಪಸ್ ಆಗಿರುವುದಕ್ಕೆ ಮಾಲೀಕರು ಅನಂದ ಭಾಷ್ಪ ಸುರಿಸಿದ್ದಾರೆ.
ಘಟನೆ ವಿವರ…
ಆಷಾಢ ಏಕಾದಶಿ ನಿಮಿತ್ತ ಪಂಢರಾಪುರದಲ್ಲಿನ ವಿಠ್ಠಲ ದೇವರ ದರ್ಶನಕ್ಕೆ ನಿಪ್ಪಾಣಿಯ ಯಮಗರ್ಣಿಯವರು ತೆರಳಿದ್ದರು. ಜ್ಞಾನದೇವ ಕುಂಬಾರ ಅವರ ʼಮಹಾರಾಜʼ ಹೆಸರಿನ ಸಾಕು ನಾಯಿಯೂ ಹಿಂಬಾಲಿಸಿ ಅವರ ಜೊತೆ ಹೋಗಿತ್ತು. ಪಂಢರಪುರ ತಲುಪಿದ ನಂತರ ಅಲ್ಲಿ ಸೇರಿದ್ದ ಜನಸಾಗರದಲ್ಲಿ ಈ ನಾಯಿ ತಪ್ಪಿಸಿಕೊಂಡಿದೆ. ಹುಡುಕಾಟ ನಡೆಸಿದರೂ ಅದು ಕಂಡುಬರಲಿಲ್ಲಿ. ಕೊನೆಗೆ ನಾಯಿಯ ಆಸೆ ಬಿಟ್ಟು ಪಂಢರಪುರಕ್ಕೆ ಹೋದವರು ಮನೆಗೆ ವಾಪಸ್ಸಾಗಿದ್ದರು. ಆದರೆ ನಾಲ್ಕು ದಿನಗಳ ಬಳಿಕ ನಾಯಿ ಪಂಢರಪುರದಿಂದ ಸುಮಾರು 200 ಕಿಮೀ ದೂರದ ನಿಪ್ಪಾಣಿಯ ಯಮಗರ್ಣಿಯ ತನ್ನ ಮನೆ ಮುಂದೆ ಪ್ರತ್ಯಕ್ಷವಾಗಿದೆ. ಇದನ್ನು ನೋಡಿ ಎಲ್ಲರಿಗೂ ಪರಮಾಶ್ಚರ್ಯ. ಈ ನಾಯಿ ಜುಲೈ 22ರಂದು ಸುರಕ್ಷಿತವಾಗಿ ತನ್ನ ಮನೆ ಸೇರಿದೆ.
ʼಮಹಾರಾಜʼ ಎಂಬ ಹೆಸರಿನ ಈ ನಾಯಿಯನ್ನು ನಾವು ಆರು ವರ್ಷಗಳಿಂದ ಸಾಕಿದ್ದೇವೆ. ಜುಲೈ ೬ರಂದು ನಾವು ಒಟ್ಟು 140 ಪಂಢರಪುರ ವಿಠ್ಠಲನ ಭಕ್ತರು ಪವಿತ್ರ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಸಾಗಿದ್ದೆವು. ಆಗ ಈ ನಾಯಿಯೂ ನಮ್ಮ ಹಿಂಬಾಲಿಸಿತು. ಆದರೆ ಪಂಢರಾಪುರದ ಜನಜಂಗುಳಿಯಲ್ಲಿ ಈ ನಾಯಿ ನಮ್ಮಿಂದ ತಪ್ಪಿಸಿಕೊಂಡಿತು. ಎಷ್ಟೇ ಹುಡುಕಿದರೂ ನಮಗೆ ಕಂಡುಬರಲಿಲ್ಲ. ಕೊನೆಗೆ ನಾಯಿಯ ಆಸೆಬಿಟ್ಟು ನಾವು ನಮ್ಮೂರಿಗೆ ಜುಲೈ 18ರಂದು ಮರಳಿ ಬಂದೆವು ಎಂದು ಜ್ಞಾನದೇವ ಹೇಳಿದ್ದಾರೆ.
ಆದರೆ ನಾವು ಆಸೆಬಿಟ್ಟಿದ್ದ ಈ ನಾಯಿ ಪಂಢರಪುರದಿಂದ ನಡೆದುಕೊಂಡು ಬಂದು ಜುಲೈ 22ರಂದು ಮನೆ ತಲುಪಿದೆ. ಅದು ಸುಮಾರು 200 ಕಿಮೀ ದೂರವನ್ನು ನಾಲ್ಕು ದಿನಗಳಲ್ಲಿ ಕ್ರಮಿಸಿದೆ. ಅದು ಹೇಗೆ ಮನೆ ಹುಡುಕಿಕೊಂಡು ಬಂದಿದೆ ಎಂಬುದೇ ಸುತ್ತಮುತ್ತಲಿನವರಿಗೆ ಅಚ್ಚರಿಯ ಸಂಗತಿಯಾಗಿದೆ. ಆದರೆ ನಮಗಂತೂ ಬಹಳ ಸಂತೋಷವಾಗಿದ್ದು, ಗ್ರಾಮಸ್ಥರು ಅದಕ್ಕೆ ಗುಲಾಲು ಎರಚಿ ಮಾಲೆ ಹಾಕಿ ಖುಷಿಪಟ್ಟಿದ್ದಾರೆ ಎಂದು ಜ್ಞಾನದೇವ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ