ಲಕ್ನೋ : ‘ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ (ತಿದ್ದುಪಡಿ) ಮಸೂದೆ-2024’ ಅನ್ನು ಉತ್ತರ ಪ್ರದೇಶ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಖನ್ನಾ ಅವರು ಈ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಸೋಮವಾರ ಮಂಡಿಸಿದ್ದರು. ಮಂಗಳವಾರ ಮಸೂದೆ ಅಂಗೀಕಾರಗೊಂಡಿದೆ.
ವಂಚನೆ ಅಥವಾ ಬಲವಂತದಿಂದ ಮತಾಂತರ ಮಾಡುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಈ ತಿದ್ದುಪಡಿ ಮಸೂದೆಯು ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ, “ಲವ್ ಜಿಹಾದ್” ಪ್ರಕರಣಗಳನ್ನು ಯಾರು ದೂರು ನೀಡಬಹುದು ಎಂಬುದರ ವ್ಯಾಪ್ತಿಯನ್ನು ಮಸೂದೆ ವಿಸ್ತರಿಸಿದೆ. ಈ ಹಿಂದೆ ಸಂತ್ರಸ್ತರು, ಅವರ ಪೋಷಕರು ಅಥವಾ ಒಡಹುಟ್ಟಿದವರು ಮಾತ್ರ ದೂರುಗಳನ್ನು ಸಲ್ಲಿಸಬಹುದಾಗಿತ್ತು. ಹೊಸ ಮಸೂದೆಯ ಪ್ರಕಾರ, ಯಾರಾದರೂ ಪೊಲೀಸರಿಗೆ ಲಿಖಿತ ದೂರುಗಳನ್ನು ಸಲ್ಲಿಸಬಹುದು.
ಈ ಮೊದಲು, ಮಹಿಳೆಯನ್ನು ಮೋಸದಿಂದ ಮದುವೆಯಾಗಿ, ನಂತರ ಆಕೆಯನ್ನು ಮತಾಂತರಗೊಳಿಸಿದ್ದು ಸಾಬೀತಾದ ಸಂದರ್ಭದಲ್ಲಿ, ಅಪರಾಧಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಲು ಅವಕಾಶ ಇತ್ತು.
‘ಬೆದರಿಕೆ ಒಡ್ಡುವ/ಹಲ್ಲೆ ಮಾಡಿ ಇಲ್ಲವೇ ಪಿತೂರಿಯ ಮೂಲಕ ವ್ಯಕ್ತಿಯು ಮಹಿಳೆಯನ್ನು ಮದುವೆಯಾದರೆ ಅಥವಾ ಮದುವೆಯಾಗುವುದಾಗಿ ಭರವಸೆ ನೀಡಿದಲ್ಲಿ; ಮತಾಂತರ ಮಾಡುವ ಉದ್ದೇಶದಿಂದ ಮಹಿಳೆ, ಬಾಲಕಿ ಅಥವಾ ಯಾವುದೇ ವ್ಯಕ್ತಿಯನ್ನು ಕಳ್ಳಸಾಗಾಣಿಕೆ ಮಾಡಿದಲ್ಲಿ ಆ ವ್ಯಕ್ತಿ ಎಸಗಿದ ಕೃತ್ಯವನ್ನು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು’ ಎಂದು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ. ಇಂತಹ ಅಪರಾಧ ಎಸಗಿದ ವ್ಯಕ್ತಿಗೆ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.
ತಿದ್ದುಪಡಿಯ ಪ್ರಮುಖ ಅಂಶಗಳು
ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿಯು ಎಫ್‌ಐಆರ್ ದಾಖಲಿಸಬಹುದು. ಸೆಷನ್ಸ್ ಕೋರ್ಟ್‌ಗಿಂತ ಕೆಳ ಹಂತದ ನ್ಯಾಯಾಲಯಗಳು ಇಂತಹ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ ಸರ್ಕಾರಿ ವಕೀಲರಿಗೆ ವಾದ ಮಂಡನೆ/ಅಭಿಪ್ರಾಯ ತಿಳಿಸಲು ಅವಕಾಶ ನೀಡದೇ ಜಾಮೀನು ಅರ್ಜಿಯನ್ನು ಪರಿಗಣಿಸುವಂತಿಲ್ಲಈ ತಿದ್ದುಪಡಿ ಕಾಯ್ದೆಯಡಿ ದಾಖಲಾಗುವ ಎಲ್ಲ ಅಪರಾಧಗಳು ಜಾಮೀನು ರಹಿತ ಅಪರಾಧಗಳಾಗಿರುತ್ತವೆ.
ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ 2020ರ ನವೆಂಬರ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡ ನಂತರ, ಕಾಯ್ದೆ ಜಾರಿಗೆ ಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ