ಢಾಕಾ : ಪ್ರಸ್ತುತ ಜೈಲಿನಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಸೋಮವಾರ ಆದೇಶಿಸಿದ್ದಾರೆ.
ಸತತ 15 ವರ್ಷಗಳಿಂದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಪತ್ರಿಕಾ ಹೇಳಿಕೆ ಪ್ರಕಾರ, ವಿರೋಧ ಪಕ್ಷದ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಹಾಬುದ್ದೀನ್ ಅವರು “ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದ್ದಾರೆ” ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಖಲೀದಾ ಜಿಯಾ ಅವರು 2018 ರಲ್ಲಿ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಜೈಲು ಪಾಲಾಗಿದ್ದರು. 78 ವರ್ಷ ವಯಸ್ಸಿನ ಖಲೀದಾ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಆಸ್ಪತ್ರೆಗೆ ಸೀಮಿತರಾಗಿದ್ದಾರೆ.
ಹಸೀನಾ ಹಾಗೂ ಜಿಯಾ ರಾಜಕೀಯ ಪ್ರತಿಸ್ಪರ್ಧಿಗಳು…
ಖಲೀದಾ ಜಿಯಾ ಅವರು ಹಸೀನಾ ಅವರ ಅವಾಮಿ ಲೀಗ್ನ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಮುಖ್ಯಸ್ಥರಾಗಿದ್ದಾರೆ. ಜೈಲಿನಲ್ಲಿರುವ ನಾಯಕಿ ಖಲೀದಾ ಜಿಯಾ ಅವರನ್ನು ಶೇಖ್ ಹಸೀನಾ ಅವರ ಕಟ್ಟಾ ವಿರೋಧಿ ಎಂದು ಪರಿಗಣಿಸಲಾಗಿದೆ.
ಶೇಖ್ ಹಸೀನಾ ಅವರು 1996 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಅದರ ನಂತರ, ಅವರು ಮತ್ತು ಖಲೀದಾ ಜಿಯಾ ಪರ್ಯಾಯ ಅವಧಿಯಲ್ಲಿ ವರ್ಷಗಳ ಕಾಲ ಸರ್ಕಾರಗಳನ್ನು ನಡೆಸಿದರು ಮತ್ತು ಅವರ ಪೈಪೋಟಿಯು ಬಾಂಗ್ಲಾದೇಶದ ರಾಜಕೀಯವನ್ನು ಧ್ರುವೀಕರಿಸಿತು.
ಅವಾಮಿ ಲೀಗ್ ತನ್ನನ್ನು ತಾನು ಸುಧಾರಣಾವಾದಿ ಮತ್ತು ಜಾತ್ಯತೀತ ಸಿದ್ಧಾಂತದ ಪಕ್ಷವೆಂದು ಬ್ರಾಂಡ್ ಮಾಡಿಕೊಂಡರೆ, ಅದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ(BNP)ಯನ್ನು ಕಟುವಾದ ತೀವ್ರಗಾಮಿತ್ವಕ್ಕೆ ಬೆಂಬಲ ನೀಡುತ್ತದೆ ಎಂದು ಆಗಾಗ್ಗೆ ಆರೋಪಿಸಿತು.
ಇವರಿಬ್ಬರ ಪೈಪೋಟಿಯು ಆನುವಂಶಿಕವಾಗಿ ಬಂದಿತ್ತು. ಹಸೀನಾ ಪ್ರಕರಣದಲ್ಲಿ ತಂದೆ ಶೇಖ್ ಮುಜಿಬುರ್ ರೆಹಮಾನ್ ಮತ್ತು ಜಿಯಾ ಪ್ರಕರಣದಲ್ಲಿ ಪತಿ ಜಿಯಾವುರ್ ರೆಹಮಾನ್ ಅವರಿಂದ ರಾಜಕೀಯ ನಾಯಕತ್ವ ಬಂದಿದೆ. 1975 ರಲ್ಲಿ ಬಂಗ ಬಂಧು ಶೇಖ್ ಮುಜಿಬುರ್ ರೆಹಮಾನ್ ಹತ್ಯೆಯ ನಂತರ ಜಿಯಾವುರ್ ರೆಹಮಾನ್ ಅಧಿಕಾರಕ್ಕೆ ಬಂದರು. ಮತ್ತು ಆದರೆ 1981 ರಲ್ಲಿ ಅವರೂ ಹತ್ಯೆಯಾದರು.
ಜಿಯಾ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡ ಸಭೆಯಲ್ಲಿ, ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಮತ್ತು ಜಮಾತ್-ಎ-ಇಸ್ಲಾಮಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಉನ್ನತ ನಾಯಕರು ಭಾಗವಹಿಸಿದ್ದರು.
“ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿತರಾಗಿರುವ ಎಲ್ಲರನ್ನು ಬಿಡುಗಡೆ ಮಾಡಲು ಸಭೆ ನಿರ್ಧರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ