ಹೆಣ್ಣುಮಕ್ಕಳ ಕಾನೂನುಬದ್ಧ ವಿವಾಹ ವಯಸ್ಸನ್ನು 9 ವರ್ಷಕ್ಕೆ ಮತ್ತು ಗಂಡುಮಕ್ಕಳಿಗೆ 15 ವರ್ಷಕ್ಕೆ ಇಳಿಸುವ ವಿವಾದಾತ್ಮಕ ಮಸೂದೆಯನ್ನು ಇರಾಕ್ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಕರಡು ಮಸೂದೆಯು ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿರ್ಧರಿಸಲು ಧಾರ್ಮಿಕ ಅಧಿಕಾರಿಗಳು ಅಥವಾ ನ್ಯಾಯಾಂಗವನ್ನು ಆಯ್ಕೆ ಮಾಡಲು ನಾಗರಿಕರಿಗೆ ಅವಕಾಶ ನೀಡುತ್ತದೆ. ಇದಕ್ಕೆ ತೀವ್ರ ಕಳವಳ ವ್ಯಕ್ತವಾಗಿದೆ. ದೇಶದಲ್ಲಿನ ಹಾಲಿ ಕಾಯ್ದೆ ಕಾನೂನುಬದ್ಧ ವಿವಾಹದ ವಯಸ್ಸನ್ನು 18 ಎಂದು ನಿಗದಿಪಡಿಸುತ್ತದೆ.
“ಈ ಹೊಸ ಕಾನೂನನ್ನು ಅಂಗೀಕರಿಸುವುದರಿಂದ ದೇಶವು ಹಿಂದಕ್ಕೆ ಚಲಿಸಲಿದೆ, ಮುಂದಕ್ಕೆ ಅಲ್ಲ” ಎಂದು ಮಾನವ ಹಕ್ಕುಗಳ ವಾಚ್ (HRW) ಸಂಶೋಧಕಿ ಸಾರಾ ಸಾನ್ಬರ್ ಸುದ್ದಿ ಸಂಸ್ಥೆ AFP ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಸ್ತುತ ಕಾನೂನನ್ನು ಉಲ್ಲಂಘಿಸಿ ಇರಾಕ್ನಲ್ಲಿನ ಧಾರ್ಮಿಕ ಮುಖಂಡರು ಬಾಲ್ಯವಿವಾಹಗಳು ಸೇರಿದಂತೆ ಪ್ರತಿ ವರ್ಷ ಸಾವಿರಾರು ನೋಂದಾಯಿಸದ ವಿವಾಹಗಳನ್ನು ನಡೆಸುತ್ತಾರೆ ಎಂದು ಸಾರಾ ಸಾನ್ಬರ್ ಅವರ ಸಂಘಟನೆಯು ಈ ವರ್ಷದ ಆರಂಭದಲ್ಲಿ ಎಚ್ಚರಿಸಿತ್ತು.
ಬಾಲ್ಯವಿವಾಹವು ಇರಾಕ್ನಲ್ಲಿ ಅತ್ಯಂತ ಕಳವಳಕಾರಿಯಾಗಿದೆ. UNICEF ಪ್ರಕಾರ, 20 ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ 28%ರಷ್ಟು ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾದವರಾಗಿದ್ದಾರೆ. ಈ ಪೈಕಿ 7#ರಷ್ಟು ಮಹಿಳೆಯರು 15 ವರ್ಷಕ್ಕಿಂತ ಮೊದಲೇ ವಿವಾಹವಾದವರಾಗಿದ್ದಾರೆ.
ಇರಾಕ್ ವುಮೆನ್ಸ್ ನೆಟ್ವರ್ಕ್ ಅಡ್ವೊಕಸಿ ಗ್ರೂಪ್ನ ಅಮಲ್ ಕಬಾಶಿ ಅವರು, ಕಾನೂನು ತಿದ್ದುಪಡಿಯು ” ಪುರುಷ ಪ್ರಾಬಲ್ಯಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ” ಎಂದು ಎಎಫ್ಪಿಗೆ ತಿಳಿಸಿದ್ದಾರೆ.
ಸಂಸದರಿಂದ ತೀವ್ರ ಹಿನ್ನಡೆ ಎದುರಿಸಿದ ನಂತರ ಜುಲೈ ಅಂತ್ಯದಲ್ಲಿ ಪ್ರಸ್ತಾವನೆಯನ್ನು ಸಂಸತ್ತಿನಿಂದ ಹಿಂತೆಗೆದುಕೊಳ್ಳಲಾಯಿತು. ಆಗಸ್ಟ್ 4 ರಂದು, ಶಿಯಾಟ್ ಬ್ಲಾಕ್ಗಳ ಬೆಂಬಲದೊಂದಿಗೆ ಇದನ್ನು ಮತ್ತೆ ಮಂಡಿಸಲಾಯಿತು. ಶಿಯಾಟ್ ಬ್ಲಾಕ್ ದೇಶದಲ್ಲಿ ಗಣನೀಯ ಪ್ರಮಾಣದ ಹಿಡಿತವನ್ನು ಹೊಂದಿದೆ.
ಮಸೂದೆಯನ್ನು ಮಂಡಿಸಿದ ಸಂಸದ ರೇದ್ ಅಲ್-ಮಲಿಕಿ, ಕಾನೂನುಬದ್ಧ ವಿವಾಹ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಆದರೆ ಅವರು, ಈ ಹಿಂದೆ, ವಿವಾದಾಸ್ಪದ ಪ್ರಸ್ತಾಪಗಳನ್ನು ಮಂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ..
ಮಹಿಳಾ ಹಕ್ಕುಗಳ ಗುಂಪುಗಳು ಉದ್ದೇಶಿತ ಕಾನೂನಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿವೆ, ಇದು ಮಹಿಳೆಯರ ಹಕ್ಕುಗಳನ್ನು ಕಡಿತಗೊಳಿಸುತ್ತದೆ ಮತ್ತು ಬಾಲ್ಯ ವಿವಾಹವನ್ನು ಕಾನೂನುಬದ್ಧಗೊಳಿಸಬಹುದು ಎಂದು ಭಯಪಡುತ್ತಾರೆ. ಇರಾಕಿನ ಮಹಿಳಾ ಸಂಸದರ ಒಕ್ಕೂಟವೂ ಈ ಮಸೂದೆಯನ್ನು ವಿರೋಧಿಸಿದೆ.
1959 ರ ಇರಾಕಿನ ರಾಜಪ್ರಭುತ್ವದ ಪತನದ ನಂತರ ಜಾರಿಗೆ ಬಂದ ಈ ಕಾನೂನು, ಕುಟುಂಬ ಕಾನೂನು ಅಧಿಕಾರವನ್ನು ಧಾರ್ಮಿಕ ವ್ಯಕ್ತಿಗಳಿಂದ ಸರ್ಕಾರದ ಅಡಿಯ ನ್ಯಾಯಾಂಗಕ್ಕೆ ವರ್ಗಾಯಿಸಿದೆ. ಹೊಸ ಮಸೂದೆಯು ಪ್ರಾಥಮಿಕವಾಗಿ ಶಿಯಾ ಮತ್ತು ಸುನ್ನಿ ಇಸ್ಲಾಂನಿಂದ ಧಾರ್ಮಿಕ ನಿಯಮಗಳನ್ನು ಅನ್ವಯಿಸುವ ಆಯ್ಕೆಯನ್ನು ಪುನಃ ಪರಿಚಯಿಸುತ್ತದೆ, ಆದರೆ ಇರಾಕ್ನ ವೈವಿಧ್ಯಮಯ ಜನಸಂಖ್ಯೆಯೊಳಗೆ ಇತರ ಧಾರ್ಮಿಕ ಅಥವಾ ಪಂಥೀಯ ಸಮುದಾಯಗಳನ್ನು ಇದು ಉಲ್ಲೇಖಿಸುವುದಿಲ್ಲ.
ಮಸೂದೆಯ ಪ್ರತಿಪಾದಕರು ಈ ಹೊಸ ಕಾನೂನು ಇಸ್ಲಾಮಿಕ್ ಕಾನೂನನ್ನು ಪ್ರಮಾಣೀಕರಿಸುವ ಮತ್ತು “ಅನೈತಿಕ ಸಂಬಂಧಗಳಿಂದ” ಯುವತಿಯರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳುತ್ತಾರೆ. ಆದಾಗ್ಯೂ, ಈ ತಾರ್ಕಿಕತೆಯು ದೋಷಪೂರಿತವಾಗಿದೆ ಮತ್ತು ಬಾಲ್ಯ ವಿವಾಹದ ಕಠೋರ ಸತ್ಯಗಳನ್ನು ನಿರ್ಲಕ್ಷಿಸುತ್ತದೆ ಎಂದು ವಿರೋಧಿಗಳು ಪ್ರತಿವಾದಿಸುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ