ವೀಡಿಯೊ..| ಪಾತ್ರೆಯಂತೆ ಸೋಪ್‌ ಹಚ್ಚಿ ಪಿಸ್ತೂಲ್ ಗಳನ್ನು ತೊಳೆಯುತ್ತಿರುವ ಮಹಿಳೆ ವೀಡಿಯೊ ವೈರಲ್ ಆದ ಬೆನ್ನಿಗೇ ಅಕ್ರಮ ಫ್ಯಾಕ್ಟರಿ ಪತ್ತೆ ಮಾಡಿದ ಪೊಲೀಸರು !

ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ಸೋಪ್‌ ಹಚ್ಚಿ ನೀರಿನಲ್ಲಿ ತೊಳೆಯುತ್ತಿರುವ ಈ ವೀಡಿಯೊದಿಂದಾಗಿ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪೊಲೀಸರು ಈ ವೀಡಿಯೊ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನೆಯೊಂದನ್ನು ಪತ್ತೆ ಮಾಡಿದ್ದು, ಅದಕ್ಕೆ ಬೀಗ ಹಾಕಿದ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಸೀರೆಯುಟ್ಟ ಮಹಿಳೆಯೊಬ್ಬರು ಸಾಬೂನು ಹಚ್ಚಿ ಪಿಸ್ತೂಲುಗಳನ್ನು ತೊಳೆಯುತ್ತಿದ್ದಾರೆ. ಪಿಸ್ತೂಲ್‌ಗಳು ದೇಶಿ ನಿರ್ಮಿತವಾಗಿದ್ದು, ಮಹಿಳೆ ಎಚ್ಚರಿಕೆಯಿಂದ ಅವುಗಳನ್ನು ಸಾಬೂನು ಹಚ್ಚಿ ಪಾತ್ರೆಯೊಂದರಲ್ಲಿ ತೊಳೆದು ಬ್ರಷ್‌ನಿಂದ ಉಜ್ಜಿ ಅವುಗಳನ್ನು ಪಳಪಳ ಹೊಳೆಯುವಂತೆ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ವೈರಲ್ ವೀಡಿಯೊವನ್ನು ಪರಿಶೀಲಿಸಿದ ನಂತರ, ಪೊಲೀಸ್ ತಂಡವು ಶುಕ್ರವಾರ ರಾತ್ರಿ ಗಣೇಶಪುರ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿತು. ಆಗ ಅಲ್ಲಿ ಕಳೆದ ಆರು ತಿಂಗಳಿನಿಂದ ಅಕ್ರಮ ಶಸ್ತ್ರಾಸ್ತ್ರ ಘಟಕ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಮಹುವಾ ಪೊಲೀಸ್ ಠಾಣೆಯ ಉಸ್ತುವಾರಿ ಪವನ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಕೆಲವು ದೇಶ ನಿರ್ಮಿತ ಪಿಸ್ತೂಲ್‌ಗಳನ್ನು ಸ್ವಚ್ಛಗೊಳಿಸುವ ಮಹಿಳೆಯ ವೀಡಿಯೊದ ಬಗ್ಗೆ ನಮಗೆ ತಿಳಿಯಿತು. ಕಡಿಮೆ ಮೊತ್ತಕ್ಕ ಪಿಸ್ತೂಲ್ ಸಿಗುವ ಕಾರಣ ಇವರ ಪಿಸ್ತೂಲ್‌ಗೆ ಬೇಡಿಕೆ ಇತ್ತು. ಪಿಸ್ತೋಲ್‌ ಪಳಪಳ ಹೊಳೆಯಲು ಬ್ರಶ್ ಬಳಸಿ ನೀರಿನಲ್ಲಿ ತೊಳೆಯುವ ಈ ವೀಡಿಯೊ ರಹಸ್ಯವಾಗಿ ಹೊರಬಂದಿದೆ. ನಂತರ ಆರೋಪಿಯು ಗಣೇಶಪುರ ಗ್ರಾಮದ ಮಹಿಳೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಆಕೆಯ ಪತಿ ಕಂಟ್ರಿಮೇಡ್ ಪಿಸ್ತೂಲ್ ತಯಾರಿಸುವ ದಂಧೆಯಲ್ಲಿ ತೊಡಗಿರುವುದು ಗೊತ್ತಾಯಿತು. ದಾಳಿಯ ಸಮಯದಲ್ಲಿ, ಮಹಿಳೆಯ ಪತಿ ಮತ್ತು ಮಾವ ಓಡಿಹೋಗಲು ಪ್ರಯತ್ನಿಸಿದಾಗ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಶೋಧದ ಸಮಯದಲ್ಲಿ, ಪೊಲೀಸರಿಗೆ 315 ಬೋರ್‌ನ ಡಬಲ್ ಬ್ಯಾರೆಲ್ ಗನ್, 315 ಬೋರ್‌ನ ಪಿಸ್ತೂಲ್, 32 ಬೋರ್‌ನ ಪಿಸ್ತೂಲ್ ಮತ್ತು ಜೋಡಿಸಬೇಕಿದ್ದ ಹಲವಾರು ಶಸ್ತ್ರಾಸ್ತ್ರಗಳ ಭಾಗಗಳನ್ನು ಪತ್ತೆ ಮಾಡಿದ್ದಾರೆ. ಈ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಿದ ವಸ್ತುಗಳು ಮತ್ತು ಉಪಕರಣಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಶಸ್ತ್ರಾಸ್ತ್ರಗಳನ್ನು ತರಿಸಲಾಗುತ್ತಿದೆ ಹಾಗೂ ಎಲ್ಲಿಗೆ ವಿತರಿಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ಬಂಧಿತರನ್ನು ಶಕ್ತಿ ಕಪೂರ್ ಸಖ್ವಾರ್ ಮತ್ತು ಅವರ ತಂದೆ ಬಿಹಾರಿಲಾಲ್ ಸಖ್ವಾರ್ ಎಂದು ಗುರುತಿಸಲಾಗಿದೆ- ಇಬ್ಬರೂ ಅಕ್ರಮ ಶಸ್ತ್ರಾಸ್ತ್ರ ಘಟಕ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲೆಲ್ಲಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಶನಿವಾರ (ಆಗಸ್ಟ್ 10) ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಿಹಾರಿಲಾಲ್ ಸಖ್ವಾರ್ ಅವರನ್ನು ಜೈಲಿಗೆ ಮತ್ತು ಅವರ ಮಗನನ್ನು ವಿಚಾರಣೆಗಾಗಿ ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
1959 ರ ಶಸ್ತ್ರಾಸ್ತ್ರ ಕಾಯಿದೆಯು ಭಾರತದ ಸಂಸತ್ತಿನ ಕಾಯಿದೆಯಾಗಿದ್ದು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಅವುಗಳಿಂದ ಉಂಟಾಗುವ ಹಿಂಸಾಚಾರವನ್ನು ನಿಗ್ರಹಿಸಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸುತ್ತದೆ ಮತ್ತು ತಿದ್ದುಪಡಿ ಮಾಡುತ್ತದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement