ವೀಡಿಯೊ | ಒಲಿಂಪಿಕ್ಸ್ ; ಬಂಗಾರ ಗೆದ್ದ ಓಟಗಾರ್ತಿಗಿಂತ 1.5 ತಾಸು ತಡವಾಗಿ ಗೆರೆ ಮುಟ್ಟಿದ ಈ ಓಟಗಾರ್ತಿಗೆ ಭಾರಿ ಹರ್ಷೋದ್ಗಾರದ ಸ್ವಾಗತ : ಯಾಕಂದ್ರೆ…

ಪ್ಯಾರಿಸ್‌ : ಭೂತಾನ್‌ನ ಮ್ಯಾರಥಾನ್ ಓಟಗಾರ್ತಿ ಕಿನ್ಜಾಂಗ್ ಲಾಮೊ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಮಹಿಳೆಯರ ಮ್ಯಾರಥಾನ್ ಸ್ಪರ್ಧೆಯಲ್ಲಿ ತಲುಪುವ ಗೆರೆಯನ್ನು ದಾಟಿದಾಗ ಪ್ಯಾರಿಸ್ ಪ್ರೇಕ್ಷಕರು ಭಾರೀ ಹರ್ಷೋದ್ಗಾರ ನೀಡಿ ಅವರನ್ನು ಸ್ವಾತಿಸಿದರು. ಆದರೆ ಅವರು ಬಂಗಾರದ ಪದಕವನ್ನು ಗೆಲ್ಲಲಿಲ್ಲ. ಬೆಳ್ಳಿ ಹಾಗೂ ಕಂಚಿನ ಪದಕವನ್ನೂ ಗೆಲ್ಲಲಿಲ್ಲ. ಆದರೂ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಬಂಗಾರ ಪದಕ ಗೆದ್ದ ಓಟಗಾರ್ತಿಗಿಂತ ಹೆಚ್ಚು ಚಪ್ಪಾಳೆ ಹಾಗೂ ಹರ್ಷೋದ್ಗಾರದ ಸ್ವಾಗತ ಪಡೆದರು. ವಾಸ್ತವದಲ್ಲಿ 26 ವರ್ಷದ ಕಿನ್ಜಾಂಗ್ ಲಾಮೊ ಅವರು ಮ್ಯಾರಥಾನ್‌ ಸ್ಪರ್ಧೆಯಲ್ಲಿ ಕೊನೆಯ ಸ್ಥಾನ ಪಡೆದರು. ಅವರು ಸಣ್ಣ ಅಂತರದಿಂದ ಕೊನೆಯ ಸ್ಥಾನದಲ್ಲಿ ಇಲ್ಲ; ಮ್ಯಾರಥಾನ್ ವಿಜೇತ ಸಿಫಾನ್ ಹ್ಯಾಸನ್ ಅವರು ಗೆರೆ ದಾಟಿದ ನಂತರ ಲಾಮೊ ಸುಮಾರು ಒಂದೂವರೆ ಗಂಟೆ ನಂತರ ಗೆರೆ ದಾಟಿದ್ದಾರೆ.

ನೆದರ್ಲೆಂಡ್ಸ್‌ನ ಸಿಫಾನ್ ಹ್ಯಾಸನ್‌ 2 ಗಂಟೆ 22 ನಿಮಿಷ 55 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ ಮಹಿಳಾ ಮ್ಯಾರಥಾನ್ ದಾಖಲೆ ಮುರಿದಿದ್ದಾರೆ. ಆದರೆ ದಿನದ ದೊಡ್ಡ ಚಪ್ಪಾಳೆ ಪಡೆಯಲು ಇದು ಅವರಿಗೆ ಸಾಕಾಗಲಿಲ್ಲ. ಆದರೆ ಭೂತಾನ್‌ನ ಮ್ಯಾರಥಾನ್ ಓಟಗಾರ್ತಿ ಕಿನ್ಜಾಂಗ್ ಲಾಮೊ ಮಾತ್ರ ಭಾರೀ ಕರತಾಡನ ಪಡೆದರು. ‘ಒಲಿಂಪಿಕ್ ಸ್ಪಿರಿಟ್’ನ ಒಂದು ಉತ್ತಮ ಉದಾಹರಣೆಯಲ್ಲಿ, ಪ್ಯಾರಿಸ್ ಪ್ರೇಕ್ಷಕರು ನಿಂತು ಭೂತಾನ್ ಓಟಗಾರ್ತಿಗೆ ಕರತಾಡನ ಮಾಡಿದರು. ಕೊನೆಯದಾಗಿ ಓಡಿ ಬಂದರೂ ಛಲ ಬಿಡದ ಆಕೆಯ ಪರಿಶ್ರಮ ಮತ್ತು ಇಚ್ಛಾಶಕ್ತಿಗೆ ಪ್ರೇಕ್ಷಕರು ಪೂರ್ಣ ಅಂಕಗಳನ್ನು ನೀಡಿದ್ದಾರೆ. ಅವರ ಕ್ರೀಡಾ ಸ್ಫೂರ್ತಿಗೆ ಬೆಂಬಲ ನೀಡಿ ಭಾರೀ ಹರ್ಷೋದ್ಗಾರ ಮಾಡಿದ್ದಾರೆ.

ಗಾರ್ಡಿಯನ್ ವರದಿ ಮಾಡಿದಂತೆ, “ಮ್ಯಾರಥಾನ್ ಅನ್ನು ಪೂರ್ಣಗೊಳಿಸುವುದು ನನ್ನ ಮೊದಲ ಗುರಿಯಾಗಿದೆ” ಎಂದು ಲಾಮೊ ಒಲಿಂಪಿಕ್ಸ್‌ ಸ್ಪರ್ಧೆಗೆ ಮೊದಲು ಹೇಳಿದ್ದರು. ಮತ್ತು ಅವರು ಆ ಗುರಿಯನ್ನು ಸಾಧಿಸಿದ್ದಾರೆ. ಭೂತಾನ್‌ನ ಪ್ಯಾರಿಸ್ ಒಲಿಂಪಿಕ್ಸ್ 2024ರ ಭೂತಾನ್‌ ತಂಡದ ಏಕೈಕ ಮಹಿಳಾ ಸದಸ್ಯೆ ಲಾಮೊ, ಮತ್ತು ಉದ್ಘಾಟನಾ ಸಮಾರಂಭದಲ್ಲಿ ತನ್ನ ರಾಷ್ಟ್ರದ ಧ್ವಜಧಾರಿಯೂ ಆಗಿದ್ದರು.
11 ಓಟಗಾರ್ತಿಯರು ಮ್ಯಾರಥಾನ್‌ ಓಟ ಪೂರ್ಣಗೊಳಿಸದಿದ್ದರೂ, ಲಾಮೊ ತನ್ನ ನಿರ್ಧಾರಕ್ಕೆ ಬದ್ಧರಾಗಿ ಮ್ಯಾರಥಾನ್‌ ಪೂರ್ಣಗೊಳಿಸಿದರು. ಆಕೆಯ ಮುಕ್ತಾಯದ ಸಮಯ 3 ಗಂಟೆ 52 ನಿಮಿಷ 59 ಸೆಕೆಂಡುಗಳು -ಬಂಗಾರ ಗೆದ್ದ ಸಿಫಾನ್‌ ಗೆರೆ ಮುಟ್ಟಿದ 90 ನಿಮಿಷಗಳ ನಂತರ. ಇಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ಬೆಳ್ಳಿ ಗೆದ್ದು ಎರಡನೇ ಸ್ಥಾನ ಪಡೆದರು, ಸಿಫಾನ್‌ ಅವರಿಂದ ಕೇವಲ ಮೂರು ಸೆಕೆಂಡುಗಳು ಹಿಂದೆ ಇದ್ದರು. ಕೀನ್ಯಾದ ಹೆಲೆನ್ ಒಬಿರಿ ಕಂಚಿನ ಪದಕವನ್ನು ಪಡೆದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement