ಮುಂಬೈ : ಬುಧವಾರ ಥಾಣೆ ನಗರದ ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ನಾಲ್ವರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಕೆಚ್ಚೆದೆಯ ಅಂಗಡಿ ಮಾಲೀಕ ಎದುರಿಸಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ.
ಅಂಗಡಿಲ್ಲಿ ತಾವೊಬ್ಬರೇ ಇದ್ದರೂ ಹೆದರದೆ ಪಿಸ್ತೂಲು ಹಿಡಿದು ಬಂದಿದ್ದ ನಾಲ್ವರು ದರೋಡೆಕೋರರನ್ನು ಎದುರಿಸಿ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ.
ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಅಂಗಡಿಗೆ ಬಂದಿದ್ದರು. ಬಾಲ್ಕಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರೋಡೆಕೋರರು ಹೆಲ್ಮೆಟ್ ಧರಿಸಿ ಅಂಗಡಿಗೆ ನುಗ್ಗುತ್ತಿರುವ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಅವರು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬ ಬಂದೂಕನ್ನು ಅಂಗಡಿ ಮಾಲೀಕನ ಹಣೆಗೆ ಪಿಸ್ತೂಲು ಗುರಿ ಹಿಡಿದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಉಳಿದ ಮೂವರು ದರೋಡೆಕೋರರು ಚಿನ್ನಾಭರಣಗಳನ್ನು ಕದಿಯಲು ಮುಂದಾಗಿದ್ದಾರೆ.
ಈ ವೇಳೆ ಧೃತಿಗೆಡದ ಅಂಗಡಿ ಮಾಲೀಕ ನಿಧಾನವಾಗಿ ಅವರಿಗೆ ಗೊತ್ತಾಗದಂತೆ ತಾನು ಕುಳಿತುಕೊಳ್ಳುವ ಸೀಟಿನ ಹಿಂಬದಿಗೆ ಇಟ್ಟುಕೊಂಡಿದ್ದ ದೊಣ್ಣೆಗೆ ಕೈಹಾಕಿದ್ದಾರೆ. ನಂತರ ಒಮ್ಮೆಲೇ ದರೋಡೆಕೋರರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕರ ಪ್ರತಿದಾಳಿ ನಿರೀಕ್ಷಿಸದ ದರೋಡೆಕೋರರುಅಂಗಡಿಯಿಂದ ಓಡಿ ಹೋಗಿದ್ದಾರೆ.
ನಂತರ ಗಲಾಟೆ ಕೇಳಿ ಅಕ್ಕಪಕ್ಕದವರು ಸ್ಥಳಕ್ಕಾಗಮಿಸಿ ದರೋಡೆಕೋರರ ತಂಡವನ್ನು ಬೆನ್ನಟ್ಟಿದ್ದಾರೆ. ಅವರಲ್ಲಿ ಒಬ್ಬನನ್ನು ಹಿಡಿದು ನಂತರ ಪೊಲೀಸರಿಗೆ ಒಪ್ಪಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಕಪೂರ್‌ಬಾವಡಿ ಪೊಲೀಸ್ ಠಾಣೆಯ ಪೊಲೀಸ್ ತಂಡವು ಆರೋಪಿಯನ್ನು ವಶಕ್ಕೆ ಪಡೆದಿದೆ.
ಸದ್ಯ ಪರಾರಿಯಾಗಿರುವ ಗ್ಯಾಂಗ್‌ನ ಇತರ ಮೂವರು ಸದಸ್ಯರನ್ನು ಸೆರೆಹಿಡಿಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಅದೃಷ್ಟವಶಾತ್ ಅಂಗಡಿ ಮಾಲೀಕನಿಗೆ ಗಾಯಗಳಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಅಮರ ಸಿಂಗ್ ಜಾಧವ್ ತಿಳಿಸಿದ್ದಾರೆ. ಅಂಗಡಿಯೊಳಗೆ ಗುಂಡಿನ ದಾಳಿ ನಡೆದಿದೆಯೇ ಅಥವಾ ಪರಾರಿಯಾದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಹಿಳೆಗೆ ಗಾಯ…
ಥಾಣೆಯಿಂದ ವರದಿಯಾದ ಮತ್ತೊಂದು ಪ್ರಕರಣದಲ್ಲಿ, 22 ವರ್ಷದ ಮಹಿಳೆಯೊಬ್ಬರು ದರೋಡೆಕೋರನನ್ನು ಬೆನ್ನಟ್ಟಲು ಪ್ರಯತ್ನಿಸಿದಾಗ ಗಾಯಗೊಂಡಿದ್ದಾರೆ, ದರೋಡೆಕೋರ ಮಹಿಳೆಯ 31,500 ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಆದರೆ, ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ವಾಗ್ಲೆ ಎಸ್ಟೇಟ್ ಪ್ರದೇಶದ ಕಿಸಾನ್ ನಗರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಘಟನೆ ನಡೆದಾಗ ಮಹಿಳೆ ಕಟ್ಟಡದ ಮೊದಲ ಮಹಡಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದರು ಎಂದು ಶ್ರೀನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದರೋಡೆಕೋರ ಮನೆಯ ಬಾಗಿಲನ್ನು ಪಕ್ಕದ ಕಿಟಕಿಯ ಮೂಲಕ ತೆರೆದು ಮನೆಗೆ ಪ್ರವೇಶಿಸಿದ್ದಾನೆ ಎಂದು ಹೇಳಲಾಗಿದೆ. ನಂತರ ಆಕೆಯ ಕತ್ತು ಹಿಡಿದು 31,500 ರೂಪಾಯಿ ಮೌಲ್ಯದ ಚಿನ್ನದ ಉಂಗುರ ಹಾಗೂ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಮಹಿಳೆ ಆತನ ಬೆನ್ನಟ್ಟಿದ್ದಾರೆ. ಆದರೆ ದರೋಡೆಕೋರ ಮಹಿಳೆ ಮೇಲೆ ಚಾಕು ಎಸೆದಿದ್ದು, ಆಕೆಯ ಕೈಗೆ ಗಾಯಗಳಾಗಿವೆ. ದರೋಡೆಕೋರನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ