ವೀಡಿಯೊ…| ಬೋಟ್ಸ್ವಾನಾ ಗಣಿಯಲ್ಲಿ 2492-ಕ್ಯಾರೆಟ್ ನ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ ; ಇದರ ಬೆಲೆ ಕೇಳಿದ್ರೆ…

ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಕೆನಡಾದ ಲುಕಾರಾ ಡೈಮಂಡ್‌ ಒಡೆತನದ ಗಣಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕಂಡುಬಂದ ಅತಿದೊಡ್ಡ ವಜ್ರ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106-ಕ್ಯಾರೆಟ್ ಬೃಹತ್‌ ಕುಲ್ಲಿನಾನ್ ವಜ್ರದ ನಂತರ ಇದು ಪತ್ತೆಯಾದ ಅತಿದೊಡ್ಡ ವಜ್ರವಾಗಿದ್ದು, ಇದು 2,492-ಕ್ಯಾರೆಟ್ ಡೈಮಂಡ್‌ ಅಗಿದೆ ಎಂದು ಬೋಟ್ಸ್ವಾನಾ ಸರ್ಕಾರ ಹೇಳಿದೆ. ಇನ್ನೂ ಹೆಸರಿಸದ ಈ ವಜ್ರವು ಬೋಟ್ಸ್ವಾನಾದ ರಾಜಧಾನಿ ಗ್ಯಾಬೊರೋನ್‌ನಿಂದ ಉತ್ತರಕ್ಕೆ 500 ಕಿಮೀ ದೂರದಲ್ಲಿರುವ ಕರೋವ್ ಗಣಿಯಲ್ಲಿ ಪತ್ತೆಯಾಗಿದೆ.BBC ಯ ಪ್ರಕಾರ ಬೋಟ್ಸ್ವಾನಾವು ವಜ್ರಗಳ ವಿಶ್ವದ ಅತಿದೊಡ್ಡ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ.

ಹೇಳಿಕೆಯೊಂದರಲ್ಲಿ, ಕೆನಡಾದ ಸಂಸ್ಥೆಯು ಈ ವಜ್ರದ ಕಲ್ಲು “ಇದುವರೆಗೆ ಪತ್ತೆಯಾದ ಅತಿ ದೊಡ್ಡ ಒರಟು ವಜ್ರಗಳಲ್ಲಿ ಒಂದಾಗಿದೆ” ಎಂದು ಹೇಳಿದೆ. “ಈ ಅಸಾಧಾರಣವಾದ 2,492-ಕ್ಯಾರೆಟ್ ವಜ್ರ ಪತ್ತೆ ಮಾಡಿರುವ ಬಗ್ಗೆ ನಾವು ಭಾವಪರವಶರಾಗಿದ್ದೇವೆ. ಅಂತಹ ಬೃಹತ್, ಉತ್ತಮ-ಗುಣಮಟ್ಟದ ವಜ್ರವನ್ನು ಅಖಂಡವಾಗಿ ಮರುಪಡೆಯುವ ಸಾಮರ್ಥ್ಯವು ವಜ್ರ ಪಡೆಯುವ ನಮ್ಮ ವಿಧಾನದ ಪರಿಣಾಮಕಾರಿತ್ವವನ್ನು ತೋರಿಸುತ್ತದೆ ಎಂದು ಲುಕಾರ ಡೈಮಂಡ್ ಮುಖ್ಯಸ್ಥ ವಿಲಿಯಂ ಲ್ಯಾಂಬ್ ಹೇಳಿದ್ದಾರೆ. “ಈ ಆವಿಷ್ಕಾರವು ನಿಜವಾದ ವಿಶ್ವ ದರ್ಜೆಯ ವಜ್ರದ ಗಣಿಯಾಗಿ ಕರೋವ್ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಹೇಳಿಕೆಯ ಪ್ರಕಾರ, ಲುಕಾರಾ ಅವರ ಮೆಗಾ ಡೈಮಂಡ್ ರಿಕವರಿ ಎಕ್ಸ್-ರೇ ತಂತ್ರಜ್ಞಾನದ ಬಳಕೆ ಮೂಲಕ ಈ ವಜ್ರವನ್ನು ಪತ್ತೆಹಚ್ಚಲಾಗಿದೆ. ಹೆಚ್ಚಿನ ಮೌಲ್ಯದ ವಜ್ರಗಳನ್ನು ಗುರುತಿಸಲು ಮತ್ತು ಸಂರಕ್ಷಿಸಲು ಈ ವಿಧಾನವನ್ನು 2017 ರಿಂದ ಬಳಸಲಾಗುತ್ತಿದೆ, ಈ ವಿಧಾನ ಬಳಸಿದರೆ ಪುಡಿಮಾಡುವ ಪ್ರಕ್ರಿಯೆಯಲ್ಲಿ ಅವು ಒಡೆಯುವುದಿಲ್ಲ.

ವಜ್ರದ ಗುಣಮಟ್ಟ ಅಥವಾ ಅದರ ಮೌಲ್ಯದ ಬಗ್ಗೆ ಕಂಪನಿಯು ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಲುಕಾರಾಗೆ ಹತ್ತಿರವಿರುವ ಜನರು ಈ ವಜ್ರ $40 ಮಿಲಿಯನ್‌ಗಿಂತಲೂ ( ₹335.61 ಕೋಟಿ ರೂ.) ಹೆಚ್ಚು ಮೌಲ್ಯದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೆ, ಇದರ ಬೆಲೆ ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಗಮನಾರ್ಹವಾಗಿ, 2019 ರಲ್ಲಿ ಕರೋವೆ ಮೈನ್‌ನಲ್ಲಿ ಪತ್ತೆಯಾದ 1,758 ಕ್ಯಾರೆಟ್‌ಗಳ ಸೆವೆಲೋ ವಜ್ರವನ್ನು ಈವರೆಗೆ ವಿಶ್ವದ ಎರಡನೇ ಅತಿದೊಡ್ಡ ಗಣಿಗಾರಿಕೆ ವಜ್ರವೆಂದು ಗುರುತಿಸಲಾಗಿತ್ತು. ಇದನ್ನು ಫ್ರೆಂಚ್ ಫ್ಯಾಶನ್ ಹೌಸ್ ಲೂಯಿ ವಿಟಾನ್ ಅವರು ಬಹಿರಂಗಪಡಿಸದ ಮೊತ್ತಕ್ಕೆ ಖರೀದಿಸಿದ್ದಾರೆ. 2016 ರಲ್ಲಿ ಅದೇ ಗಣಿಯಲ್ಲಿ ಪತ್ತೆಯಾದ 1,109-ಕ್ಯಾರೆಟ್ ವಜ್ರವನ್ನು 2017 ರಲ್ಲಿ ಲಂಡನ್ ಆಭರಣ ವ್ಯಾಪಾರಿ ಲಾರೆನ್ಸ್ ಗ್ರಾಫ್ ಅವರು 2017 ರಲ್ಲಿ $ 53 ಮಿಲಿಯನ್‌(443.98 ಕೋಟಿ ರೂ.)ಗೆ ಖರೀದಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement