ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳದಲ್ಲಿ ಯುವಕರಿಬ್ಬರ ಬೈಕ್ ವ್ಹೀಲಿಂಗ್ ಹುಚ್ಚಿಗೆ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ ಕುಂಟೋಜಿ ಗ್ರಾಮದ ಹತ್ತಿರ ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೈಕ್ ಸವಾರ ಗೋಟಖಂಡಕಿ ಗ್ರಾಮದ ನಿವಾಸಿ ನಿಂಗರಾಜ ಚೌಧರಿ(22), ಹಿಂಬದಿ ಸವಾರ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಗ್ರಾಮದ ನಿವಾಸಿ ಅನಿಲ ಖೈನೂರ(23) ರಸ್ತೆ ಬದಿ ನಿಂತಿದ್ದ ಮಲಗಲದಿನ್ನಿ ಗ್ರಾಮದ ಉದಯ ಕುಮಾರ ಪ್ಯಾಟಿ(19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಯಪ್ಪ ಬಾಗೇವಾಡಿ(24) ಎಂಬವರು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಶಾಹೀದ್ ಹುನಗುಂದ, ಪ್ರಶಾಂತ ಕುರುಬಗೌಡರ, ಹನುಮಂತ ಕುರುಬಗೌಡರ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾತ್ರೆ ನೋಡಲು ಬಂದಿದ್ದರು…
ಮೃತರೆಲ್ಲರೂ ಮಲಗಲದಿನ್ನಿ ಗ್ರಾಮದವರು ಎಂದು ಹೇಳಲಾಗಿದೆ. ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ನೋಡಲು ಸುತ್ತಲಿನ ಹಳ್ಳಿಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇವರಲ್ಲಿ ಕೆಲವು ಯುವಕರು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಆಯತಪ್ಪಿ ಇವರೆಲ್ಲರಿಗೂ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೂ ಸೇರಿ ಮೂವರ ತಲೆಗೆ ಭಾರೀ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬಾಗಲಕೋಟೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ ಓರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನೊಬ್ಬನ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದು ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ