ಕೋಲ್ಕತ್ತಾ : ಟಿಎಂಸಿ ರಾಜ್ಯಸಭಾ ಸಂಸದ ಜವಾಹರ ಸರ್ಕಾರ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಆರ್.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಮಮತಾ ಸರ್ಕಾರವು ಪ್ರತಿಭಟನೆಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸಾರ ಭಾರತಿಯ ಮಾಜಿ ಮುಖ್ಯಸ್ಥ ಸರ್ಕಾರ್ ತಾವು ರಾಜಕೀಯವನ್ನೂ ತ್ಯಜಿಸುವುದಾಗಿ ಹೇಳಿದ್ದಾರೆ. ರಾಜೀನಾಮೆ ಪತ್ರದಲ್ಲಿ ಅವರು ಸಂಸತ್ತಿನಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಆದರೆ ಭ್ರಷ್ಟಾಚಾರದ ವಿರುದ್ಧ ಕ್ರಮದ ಕೊರತೆಯ ಬಗ್ಗೆ ತಮ್ಮ ಹತಾಶೆಯನ್ನು ಒತ್ತಿ ಹೇಳಿದ್ದಾರೆ.
“ಭ್ರಷ್ಟ ಅಧಿಕಾರಿಗಳು (ಅಥವಾ ವೈದ್ಯರು) ಪ್ರಧಾನ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವಂತಹ ಕೆಲವು ವಿಷಯಗಳನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಸರ್ಕಾರ್ ಬರೆದಿದ್ದಾರೆ. ಈ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶವು ಟಿಎಂಸಿ ಸರ್ಕಾರದ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ. ಇದು ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಅವರು ಬಣ್ಣಿಸಿದ್ದಾರೆ.
“ನನ್ನ ಎಲ್ಲ ವರ್ಷಗಳಲ್ಲಿ, ಸರ್ಕಾರ ಕೆಲವೊಂದಿಷ್ಟನ್ನು ಸರಿಯಾದದ್ದನ್ನು ಅಥವಾ ವಾಸ್ತವಿಕವಾದದ್ದನ್ನು ಹೇಳಿದರೂ ಸಹ ಸರ್ಕಾರದ ವಿರುದ್ಧ ಅಂತಹ ಕೋಪ ಮತ್ತು ಸಂಪೂರ್ಣ ಅವಿಶ್ವಾಸವನ್ನು ನಾನು ನೋಡಿಲ್ಲ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸರ್ಕಾರದ ಪ್ರತಿಕ್ರಿಯೆಯಿಂದ ಬೇಸರ ವ್ಯಕ್ತಪಡಿಸಿದ ಅವರು, ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಭೀಕರ ಘಟನೆಯಿಂದ ಒಂದು ತಿಂಗಳ ಕಾಲ ತಾಳ್ಮೆಯಿಂದ ಬಳಲಿದ್ದೇನೆ ಮತ್ತು ಮಮತಾ ಅವರ ಹಳೆಯ ಶೈಲಿಯಲ್ಲಿ ಧರಣಿ ನಿರತ ಕಿರಿಯ ವೈದ್ಯರೊಂದಿಗೆ ಮಮತಾ ಬ್ಯಾನರ್ಜಿ ಅವರ ನೇರ ಮಧ್ಯಸ್ಥಿಕೆಯನ್ನು ಆಶಿಸಿದ್ದೆ. ಆದು ಸಂಭವಿಸಿಲ್ಲ ಮತ್ತು ಸರ್ಕಾರವು ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತಡವಾಯ್ತು ಎಂದು ಹೇಳಿರುವ ಅವರು, ಕೆಲವು ನಾಯಕರ ಭ್ರಷ್ಟಾಚಾರ ಮತ್ತು ದುರಹಂಕಾರದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
“41 ವರ್ಷಗಳ ಐಎಎಸ್ ನಂತರ, ನಾನು ಸಣ್ಣ ಮಧ್ಯಮ ವರ್ಗದ ಫ್ಲಾಟ್‌ನಲ್ಲಿ, ದೊಡ್ಡ ಕೊಳೆಗೇರಿಯ ಪಕ್ಕದಲ್ಲಿ ಮುಜುಗರವಿಲ್ಲದೆ ಬದುಕಬಲ್ಲೆ ಮತ್ತು 9 ವರ್ಷ ಹಳೆಯ ಕಾರನ್ನು ಓಡಿಸುತ್ತೇನೆ. ಆದರೆ ಹಲವಾರು ಚುನಾಯಿತ ಪಂಚಾಯತ್ ಮತ್ತು ಪುರಸಭೆಯ ಮುಖಂಡರು ದೊಡ್ಡ ಆಸ್ತಿಗಳನ್ನು ಗಳಿಸಿ ದುಬಾರಿ ವಾಹನಗಳಲ್ಲಿ ತಿರುಗುತ್ತಿರುವುದನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಇದು ನನಗೆ ಮಾತ್ರವಲ್ಲ, ಪಶ್ಚಿಮ ಬಂಗಾಳದ ಜನರಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು.
ಆಂದೋಲನದ ಮುಖ್ಯವಾಹಿನಿಯು ರಾಜಕೀಯೇತರವಾಗಿದೆ ಮತ್ತು ಸ್ವಯಂಪ್ರೇರಿತವಾಗಿದೆ. ಅದಕ್ಕೆ ರಾಜಕೀಯ ಎಂಬ ಹಣೆಪಟ್ಟಿ ಹಚ್ಚಿ ಸಂಘರ್ಷದ ಬಗ್ಗೆ ನಿಲುವು ತಳೆಯುವುದು ಸರಿಯಲ್ಲ ಎಂದು ಆರ್‌ಜಿ ಕರ್ ಪ್ರತಿಭಟನೆ ಕುರಿತು ಅವರು ಹೇಳಿದರು. ಸಹಜವಾಗಿ, ವಿಪಕ್ಷಗಳು ಪ್ರಕ್ಷುಬ್ಧ ನೀರಿನಲ್ಲಿ ಮೀನು ಹಿಡಿಯಲು ಪ್ರಯತ್ನಿಸುತ್ತವೆ, ಆದರೆ ಪ್ರತಿ ದಿನವೂ ಬೀದಿಗಿಳಿದ ಯುವಕರು ಮತ್ತು ಜನಸಾಮಾನ್ಯರು ಅವರನ್ನು ಪ್ರೋತ್ಸಾಹಿಸುವುದಿಲ್ಲ. ಅವರಿಗೆ ಯಾವುದೇ ರಾಜಕೀಯ ಬೇಡ: ಅವರಿಗೆ ನ್ಯಾಯ ಮತ್ತು ಶಿಕ್ಷೆ ಬೇಕು… ಇದು ತಕ್ಷಣದ ಕ್ರಮಕ್ಕೆ ಕರೆ ನೀಡುತ್ತದೆ ಇಲ್ಲದಿದ್ದರೆ ಕೋಮುವಾದಿ ಶಕ್ತಿಗಳು ಈ ರಾಜ್ಯವನ್ನು ವಶಪಡಿಸಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.
ಹಲವಾರು ತಿಂಗಳುಗಳಲ್ಲಿ ಬ್ಯಾನರ್ಜಿ ಅವರೊಂದಿಗೆ “ಖಾಸಗಿಯಾಗಿ ಮಾತನಾಡುವ ಅವಕಾಶ” ತನಗೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. “3 ವರ್ಷಗಳ ಕಾಲ ಸಂಸತ್ತಿನಲ್ಲಿ ಬಂಗಾಳದ ಸಮಸ್ಯೆಗಳನ್ನು ಪ್ರಸ್ತಾಪಿಸಲು ನೀವು ನನಗೆ ನೀಡಿದ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ, ಆದರೆ ನಾನು ಸಂಸದನಾಗಿ ಮುಂದುವರಿಯಲು ಬಯಸುವುದಿಲ್ಲ. ಕೇಂದ್ರ ಮತ್ತು ರಾಜ್ಯಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡುವ ನನ್ನ ಬದ್ಧತೆ ಕೇವಲ ಮಾತುಕತೆಗೆ ಮಾತ್ರ ಸೀಮಿತವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅವರ ರಾಜೀನಾಮೆಯ ನಂತರ, ಬಿಜೆಪಿ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದು, “ನಾನು ಯಾವಾಗಲೂ ರಾಜಕೀಯವಾಗಿ ಸರ್ಕಾರ್ ಅವರ ವಿರೋಧಿ ಸ್ಥಾನದಲ್ಲಿದ್ದೇನೆ, ಆದರೆ ರಾಜ್ಯಸಭೆಗೆ ಅವರು ರಾಜೀನಾಮೆ ನೀಡಿರುವುದು ದೊಡ್ಡ ನಷ್ಟವಾಗಿದೆ. ಜವಾಹರ್ ಸರ್ಕಾರ್ ಮತ್ತು ಸುಖೇಂದು ಶೇಖರ ರಾಯ್ ಅವರಂತಹ ನಾಯಕರು ಇಂದು ಪಕ್ಷದ ವಿರುದ್ಧ ಹೋಗುತ್ತಿದ್ದಾರೆ, ಯಾಕೆ ಹೋಗುತ್ತಿದ್ದಾರೆ ಎಂಬುದನ್ನು ಟಿಎಂಸಿ ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ