ಮಂಗಳವಾರ ಮಹಾರಾಷ್ಟ್ರದ ಬೀಡ್‌ನಲ್ಲಿ ತಿಂದ ಆಹಾರದ ಬಿಲ್ ಪಾವತಿಸಲು ಹೇಳಿದ ಹೊಟೇಲ್ ಮಾಣಿ(waiter)ಯನ್ನು ಕಾರಿನಲ್ಲಿ ಒಂದು ಕಿಮೀ ಎಳೆದೊಯ್ದ ಘಟನೆ ನಡೆದಿರುವುದು ವರದಿಯಾಗಿದೆ. ನಂತರ ಮಾಣಿಯನ್ನು ಒತ್ತೆಯಾಳಾಗಿಟ್ಟುಕೊಂಡು ಇಡೀ ರಾತ್ರಿ ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಮೂವರು ಊಟ ಮಾಡಿದ್ದಾರೆ. ನಂತರ ಬಿಲ್ ತರುವಂತೆ ಮಾಣಿಗೆ ಸೂಚಿಸಿ ಈ ಯುವಕರು ಕಾರು ಹತ್ತಿದ್ದಾರೆ, ನಂತರ ಹೊಟೇಲ್ ಮಾಣಿ ಕಾರಿನ ಬಳಿ ಬಂದಾಗ ಬಿಲ್ ಹಣ ಪಾವತಿಸಲು ನಿರಾಕರಿಸಿದ್ದಾರೆ ಹಾಗೂ ಆತನೊಂದಿಗೆ ಜಗಳವಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಅವರು ಕಾರು ಚಲಾಯಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದಾಗ, ಮಾಣಿ ಮುಂದೆ ನುಗ್ಗಿ ಚಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಮಾಣಿಯನ್ನು ಒಂದು ಕಿಲೋಮೀಟರ್ ಎಳೆದೊಯ್ದಿದ್ದಾನೆ. ನಂತರ ಈ ಮೂವರು ಮಾಣಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಇಡೀ ರಾತ್ರಿ ಥಳಿಸಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಾಣಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಪೊಲೀಸರ ಹೇಳಿಕೆಯ ಪ್ರಕಾರ, ಸಖಾರಾಮ ಜನಾರ್ದನ ಮುಂಡೆ ಎಂಬ ವ್ಯಕ್ತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಧಾಬಾದಲ್ಲಿ ತಿನ್ನಲು ಬಂದಿದ್ದ. ಊಟ ಮುಗಿಸಿ ಮಾಣಿ ಶೇಖ್ ಸಾಹಿಲ್ ಅನುಸುದ್ದೀನ್ ಎಂಬನಿಗೆ ಬಿಲ್ ತರುವಂತೆ ಹೇಳಿದ್ದಾರೆ. ಇದಾದ ನಂತರ ಮೂವರು ಕಾರಿನಲ್ಲಿ ಕುಳಿತು ಓಡಿ ಹೋಗಲು ಮುಂದಾಗಿದ್ದಾರೆ. ಮಾಣಿ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ಚಾಲಕ ಮಾಣಿಯನ್ನು ತಮ್ಮೊಂದಿಗೆ ಎಳೆದೊಯ್ದಿದ್ದಾನೆ.
ಮಾಣಿಯಿಂದ 11,500 ರೂ. ಕಿತ್ತುಕೊಂಡ ಆರೋಪಿಗಳು….
ರಾತ್ರಿಯಿಡೀ ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಥಳಿಸಿ ಆರೋಪಿಗಳು ತನ್ನಲ್ಲಿದ್ದ 11,500 ರೂ.ಗಳನ್ನು ದೋಚಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಾಣಿ ಶೇಖ್ ಸಾಹಿಲ್ ಅನುಸುದ್ದೀನ್ ಎಂಬಾತನ ದೂರಿನ ಮೇರೆಗೆ ದಿಂಡ್ರೂಡ್ ಪೊಲೀಸರು ಸಖಾರಾಮ ಜನಾರ್ದನ ಮುಂಡೆ ಸೇರಿದಂತೆ ಮೂವರ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ