ಗಾಜಿಯಾಬಾದ್ : ಅಂಗಡಿಯ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ಜ್ಯೂಸ್ ನೀಡುವಾಗ ಅದಕ್ಕೆ ಮೂತ್ರ ಬೆರೆಸಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ಜನರು ವ್ಯಾಪಾರಿಯನ್ನು ಮನಬಂದಂತೆ ಥಳಿಸಿದ್ದು, ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ.
ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಖುಷಿ ಜ್ಯೂಸ್ ಕಾರ್ನರ್ ಮಾಲೀಕ ಅಮೀರ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಹಾಗೂ ಆತನ ಅಪ್ರಾಪ್ತ ಕೆಲಸಗಾರನನ್ನು ವಶಕ್ಕೆ ಪಡೆದಿದ್ದಾರೆ.
ಅಂಗಡಿಯವರು ಹಣ್ಣಿನ ರಸಕ್ಕೆ ಹಳದಿ ಮಿಶ್ರಿತ ದ್ರವವನ್ನು ಬೆರೆಸುವುದನ್ನು ಕೆಲವರು ಗಮನಿಸಿದ ನಂತರ ಆತ ಜ್ಯೂಸಿಗೆ ಮೂತ್ರ ಬೆರೆಸಿ ನೀಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಅಷ್ಟರಲ್ಲಾಗಲೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂಗಡಿ ಮಾಲೀಕರನ್ನು ಥಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಬಂದ ನಂತರ ಜ್ಯೂಸ್ ಸ್ಟಾಲ್ ನಲ್ಲಿ ತಪಾಸಣೆ ನಡೆಸಿದಾಗ ಮೂತ್ರ ತುಂಬಿದ್ದ ಪ್ಲಾಸ್ಟಿಕ್ ಡಬ್ಬ ಪತ್ತೆಯಾಗಿದೆ.
ಈ ಕೃತ್ಯದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ವರ್ಮಾ ಹೇಳಿದ್ದಾರೆ. ಅಂಗಡಿಯಲ್ಲಿ ಮೂತ್ರ ಇದ್ದ ಬಗ್ಗೆ ಅಂಗಡಿಯವ ಯಾವುದೇ ತೃಪ್ತಿಕರ ಉತ್ತರವನ್ನು ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ.
“ಸೆಪ್ಟೆಂಬರ್ 13 ರಂದು ಮಾಹಿತಿ ಬಂದ ನಂತರ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು ಮತ್ತು ಅಂಗಡಿಯಲ್ಲಿನ ಡಬ್ಬದಲ್ಲಿ ಸುಮಾರು 1 ಲೀಟರ್ ಅನುಮಾನಾಸ್ಪದ ಮೂತ್ರ ಪತ್ತೆಯಾಗಿದೆ. ಪೊಲೀಸರು ಅಮೀರ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಎಫ್ಐಆರ್ ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಡಬ್ಬದಲ್ಲಿನ ಮೂತ್ರವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ವರ್ಮಾ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ