ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಫ್ಲೋರಿಡಾ ಎಸ್ಟೇಟ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ ಭಾನುವಾರ ಹತ್ಯೆ ಯತ್ನಕ್ಕೆ ಗುರಿಯಾಗಿದ್ದಾರೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಈ ಘಟನೆಯನ್ನು “ಹತ್ಯೆಯ ಯತ್ನ” ಎಂದು ದೃಢಪಡಿಸಿದೆ. ಇದು ಒಂಬತ್ತು ವಾರಗಳಲ್ಲಿ ಟ್ರಂಪ್ ಅವರ ಹತ್ಯೆ ಯತ್ನದ ಎರಡನೇ ಪ್ರಯತ್ನವಾಗಿದೆ. ಸಿಕ್ರೇಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಗಾಲ್ಫ್ ಆಡುತ್ತಿದ್ದ ಸ್ಥಳದಿಂದ ಕೆಲವು ನೂರು ಗಜಗಳಷ್ಟು ದೂರದಲ್ಲಿರುವ ಗಾಲ್ಫ್ ಕೋರ್ಸ್‌ನ ಪ್ರಾಪರ್ಟಿ ಲೈನ್ ಬಳಿಯ ಪೊದೆಗಳಲ್ಲಿ ಬಂದೂಕುಧಾರಿಯೊಬ್ಬನನ್ನು ಗುರುತಿಸಿ ಗುಂಡು ಹಾರಿಸಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸಿದ ವ್ಯಕ್ತಿಯನ್ನು ಶಸ್ತ್ರಾಸ್ತ್ರದೊಂದಿಗೆ ಬಂಧಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಪೆನ್ಸಿಲ್ವೇನಿಯಾ ಪ್ರಚಾರ ರ್ಯಾಲಿಯಲ್ಲಿ ಗುಂಡಿನ ದಾಳಿಯಿಂದ ಬದುಕುಳಿದ ಕೇವಲ ಎರಡು ತಿಂಗಳ ನಂತರ ಈ ಘಟನೆ ನಡೆದಿದೆ. ಟ್ರಂಪ್ ಮತ್ತೊಮ್ಮೆ ಹತ್ಯೆಯ ಯತ್ನಕ್ಕೆ ಗುರಿಯಾಗಿದ್ದಾರೆ. ನವೆಂಬರ್ 5 ರ ಅಧ್ಯಕ್ಷೀಯ ಚುನಾವಣೆಗೆ ಕೇವಲ ಏಳು ವಾರಗಳು ಮಾತ್ರ ಉಳಿದಿವೆ, ಎರಡೂ ಘಟನೆಗಳು ಹೆಚ್ಚು ಧ್ರುವೀಕೃತ ರಾಜಕೀಯ ವಾತಾವರಣದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳು ಎದುರಿಸುತ್ತಿರುವ ಅಪಾಯಗಳನ್ನು ಒತ್ತಿಹೇಳುತ್ತವೆ. ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ಇರುವ ಬಗ್ಗೆ ಶಂಕಿತರಿಗೆ ಹೇಗೆ ತಿಳಿದಿತ್ತು ಎಂಬುದು ಅಸ್ಪಷ್ಟವಾಗಿದೆ.
ಟ್ರಂಪ್ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ಅವರಿಗೆ ಗುಂಡು ತಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ಟ್ರಂಪ್ ಪ್ರಚಾರದ ವಕ್ತಾರ ಸ್ಟೀವನ್ ಚೆಯುಂಗ್ ತಿಳಿಸಿದ್ದಾರೆ.
ದಾಳಿ ನಡೆದಿದ್ದು ಹೇಗೆ?
ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಬಂದೂಕುಧಾರಿ ಮಾಜಿ ಅಧ್ಯಕ್ಷರಿಂದ 400 ರಿಂದ 500 ಗಜಗಳಷ್ಟು ದೂರದಲ್ಲಿದ್ದ ಎಂದು ಸ್ಥಳೀಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ, ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನ ಪೊದೆಯಲ್ಲಿ ಆತ ಅಡಗಿಕೊಂಡಿದ್ದ. ಟ್ರಂಪ್ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯನ್ನು ರಿಯಾನ್ ವೆಸ್ಲಿ ರೌತ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಘಟನೆಯ ನಂತರ, ರೌತ್ ಶಸ್ತ್ರಾಸ್ತ್ರವನ್ನು ಎಸೆದು ನಂತರ SUV ಯಲ್ಲಿ ಪರಾರಿಯಾದ. ಆದರೆ ನಂತರ ನೆರೆಯ ಕೌಂಟಿಯಲ್ಲಿ ಆತನನ್ನು ಬಂಧಿಸಲಾಯಿತು. ಘಟನಾ ಸ್ಥಳದ ಸಮೀಪ ಬೇಲಿಯ ಮೇಲೆ ರೌತ್ ಎರಡು ಬೆನ್ನುಹೊರೆಗಳನ್ನು ನೇತುಹಾಕಿದ್ದ ಮತ್ತು ಗೋಪ್ರೊ ಕ್ಯಾಮೆರಾವನ್ನು ಹೊಂದಿದ್ದ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ದಾಳಿಯ ಉದ್ದೇಶವು ಅಸ್ಪಷ್ಟವಾಗಿಯೇ ಉಳಿದಿದೆ, ಉತ್ತರ ಕೆರೊಲಿನಾ ವಯಸ್ಕರ ತಿದ್ದುಪಡಿ ಇಲಾಖೆಯ ದಾಖಲೆಗಳು 2002 ರಲ್ಲಿ ಸಾಮೂಹಿಕ ವಿನಾಶದ ಆಯುಧವನ್ನು ಹೊಂದಿದ್ದಕ್ಕಾಗಿ ರೌತ್‌ಗೆ ಈ ಹಿಂದೆ ಶಿಕ್ಷೆ ವಿಧಿಸಲಾಗಿತ್ತು ಎಂದು ಹೇಳಿದೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಬೆಂಬಲಿಗರಿಗೆ ಇಮೇಲ್‌ನಲ್ಲಿ ಟ್ರಂಪ್,ನನ್ನ ಸಮೀಪದಲ್ಲಿ ಗುಂಡಿನ ದಾಳಿ ನಡೆದಿವೆ. ನಾನು ಸುರಕ್ಷಿತ ಮತ್ತು ಆರೋಗ್ಯವಾಗಿದ್ದೇನೆ. ಯಾವುದೂ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾನು ಎಂದಿಗೂ ಶರಣಾಗುವುದಿಲ್ಲ’ ಎಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಕಳುಹಿಸಿದ ಸಂದೇಶದಲ್ಲಿ ಹೇಳಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಟ್ರಂಪ್ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಗುಂಡಿನ ಸದ್ದು ಕೇಳಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಹತ್ಯೆ ಯತ್ನದ ತನಿಖೆ ನಡೆಸುತ್ತಿದೆ.
ಜುಲೈ 13ರಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಪರ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಆಗ ಟ್ರಂಪ್ ಬಲ ಕಿವಿಗೆ ಗುಂಡು ತಗುಲಿತ್ತು, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಭಾನುವಾರ ಮಧ್ಯಾಹ್ನ 2ನೇ ಬಾರಿಗೆ ಅವರ ಮೇಲೆ ದಾಳಿ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ