ಮಂಗಳೂರು : ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್ ದಾನ ಮಾಡಿ ಅವರ ಜೀವ ಉಳಿಸಿದ್ದ ನಗರದ ಉಪನ್ಯಾಸಕಿಯೊಬ್ಬರು ಕೆಲದಿನಗಳ ನಂತರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್ (33) ಅವರು ತಮ್ಮ ಸಂಬಂಧಿಕರಿಗೆ ಪಿತ್ತಜನಕಾಂಗ (ಲಿವರ್) ದಾನ ಮಾಡಿದ ನಂತರ ಹಠಾತ್ ಆರೋಗದಯಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ತನ್ನ ಪತಿಯ ಸಂಬಂಧಿ ಮಹಿಳೆಗೆ ಅನಾರೋಗ್ಯ ಉಂಟಾಗಿದ್ದು, ಅವರಿಗೆ ಲಿವರ್‌ನ ಅಗತ್ಯವಿತ್ತು ಎಂದು ಹೇಳಲಾಗಿದೆ. ಅವರಿಗೆ ಲಿವರ್ ದಾನ ಮಾಡಲೆಂದು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ತಪಾಸನೆಗೆ ಒಳಪಟ್ಟವರ ಪೈಕಿ ಯಾರೊಬ್ಬರ ರಕ್ತದ ಗುಂಪು ಕೂಡ ಹೊಂದಾಣಿಕೆ ಆಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹೀಗಾಗಿ ಅರ್ಚನಾ ಪಿತ್ತಜಕಾಂಗದ ಭಾಗದ ದಾನಕ್ಕೆ ಒಪ್ಪಿದ್ದರು.
ಅದರಂತೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾರ ಅವರ ಲಿವರ್ ಅನ್ನು ಭಾಗಶಃ ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತ್ರಚಿಕಿತ್ಸೆ ನಡೆದಿತ್ತು. ಇದಾದ ನಂತರ ಆರೋಗ್ಯದಿಂದಿದ್ದ ಅರ್ಚನಾ ಅವರು ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಮೂರ್ನಾಲ್ಕು ದಿನಗಳ ಹಿಂದೆ ಅರ್ಚನಾ ಏಕಾಏಕಿ ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ. ಅರ್ಚನಾರಿಂದ ಲಿವರ್ ದಾನ ಪಡೆದ ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಅರ್ಚನಾ ಅವರ ಹಠಾತ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅರ್ಚನಾ ಅವರು ನಗರದ ಕೆನರಾ ಕಾಲೇಜಿನಲ್ಲಿ ಈ ಮೊದಲು ಉಪನ್ಯಾಸಕಿಯಾಗಿದ್ದರು. ಬಳಿಕ ಮಣೇಲ್ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅರ್ಚನಾ ಪತಿ ಲೆಕ್ಕಪರಿಶೋಧಕ (ಸಿಎ) ಚೇತನ್ ಕಾಮತ್ ಮತ್ತು 4 ವರ್ಷದ ಪುತ್ರನನ್ನು ಅಗಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ