ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ನೂರಾರು ವಾಕಿ-ಟಾಕೀ, ಪೇಜರ್‌ಗಳು ಸ್ಫೋಟ ; 32 ಜನರು ಸಾವು, 3,250 ಕ್ಕೂ ಹೆಚ್ಚು ಮಂದಿಗೆ ಗಾಯ

ಬೈರುತ್‌ : ಕಳೆದ ಎರಡು ದಿನಗಳಲ್ಲಿ ಲೆಬನಾನ್‌ನಾದ್ಯಂತ ಹಿಜ್ಬೊಲ್ಲಾ ಸದಸ್ಯರು ಬಳಸಿದ ವಾಕಿ-ಟಾಕಿಗಳು ಮತ್ತು ಪೇಜರ್‌ಗಳನ್ನು ಸ್ಫೋಟಿಸಿದ್ದರಿಂದ ಕನಿಷ್ಠ 32 ಜನರು ಸಾವಿಗೀಡಾಗಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನೊಂದಿಗೆ ಸಂಪೂರ್ಣ ಯುದ್ಧ ನಡೆಯುವ ಆತಂಕಕ್ಕೆ ಕಾರಣವಾಗಿದೆ.
ಇರಾನ್ ಬೆಂಬಲಿತ ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಬೈರುತ್ ಭದ್ರಕೋಟೆಯಲ್ಲಿ ಸ್ಫೋಟಗೊಂಡವು, ಇದರಲ್ಲಿ ಕನಿಷ್ಠ 20 ಜನರು ಸಾವಿಗೀಡಾದರು ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡರು. ಹಿಂದಿನ ದಿನ ಪೇಜರ್‌ ಸ್ಫೋಟದಿಂದ ಕೊಲ್ಲಲ್ಪಟ್ಟವರಿಗೆ ಹಿಜ್ಬೊಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆಯ ಬಳಿಯೂ ಬುಧವಾರದ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ. ಸಾವುನೋವುಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಹಿಜ್ಬೊಲ್ಲಾ ಬಳಸಿದ ಸಾವಿರಾರು ಪೇಜರ್‌ಗಳು ಲೆಬನಾನ್‌ನಾದ್ಯಂತ ಸ್ಫೋಟಗೊಂಡ ಒಂದು ದಿನದ ನಂತರ ಅವರು ಬಳಸುತ್ತಿದ್ದ ವಾಕಿ-ಟಾಕಿಗಳ ಸ್ಫೋಟಗಳು ಸಂಭವಿಸಿದವು. ಪೇಜರ್‌ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಸಾವಿಗೀಡಾಗಿದ್ದರು ಮತ್ತು ಸುಮಾರು 2,800 ಜನರು ಗಾಯಗೊಂಡಿದ್ದರು.”ಈ ಸ್ಫೋಟಕ್ಕೆ ಇಸ್ರೇಲ್ ಸಂಪೂರ್ಣ ಹೊಣೆ ಮತ್ತು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬೊಲ್ಲಾ ಗುಂಪು ಹೇಳಿದೆ. ಸ್ಫೋಟದ ಬಗ್ಗೆ ಇಸ್ರೇಲ್ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 5 ದಿನ ಲಾಕ್‌ಡೌನ್‌.. ಶಾಲಾ-ಕಾಲೇಜು ಬಂದ್‌; ಮದುವೆ-ಸಮಾರಂಭ ಬ್ಯಾನ್‌, ಭದ್ರತೆ ಸೇನೆ ನಿಯಂತ್ರಣಕ್ಕೆ

ಮಂಗಳವಾರದ ಸ್ಫೋಟಗಳಲ್ಲಿ, ಇಸ್ರೇಲಿ ಗೂಢಚಾರರು ದೇಶಕ್ಕೆ ಪ್ರವೇಶಿಸುವ ಮೊದಲು 5,000 ಪೇಜರ್‌ಗಳನ್ನು ರಿಮೋಟ್‌ನಿಂದ ಸ್ಫೋಟಿಸಿದ್ದಾರೆ ಎಂದು ಹಿಜ್ಬೊಲ್ಲಾ ಆರೋಪಿಸಿದೆ.
ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ನಾಯಕರ ಮೇಲೆ ಗುರಿಯಿಟ್ಟು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಸ್ಮಾರ್ಟ್‌ಫೋನ್‌ ಬಳಕೆಯಿಂದ ನಮ್ಮ ಮಾಹಿತಿಗಳು ಸೋರಿಕೆಯಾಗಿ ಇಸ್ರೇಲ್‌ ದಾಳಿ ಮಾಡುತ್ತಿದೆ ಎಂದು ಅರಿತ ಹಿಜ್ಬೊಲ್ಲಾ ಇಸ್ರೇಲಿ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಮೊಬೈಲ್‌ ಫೋನ್‌ ಬಳಸದೇ ಸಂವಹನಕ್ಕಾಗಿ ಪೇಜರ್‌ಗಳು ಮತ್ತು ಇತರ ಕಡಿಮೆ-ತಂತ್ರಜ್ಞಾನದ ಸಂವಹನ ಸಾಧನಗಳನ್ನು ಉಪಯೋಗಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಅತ್ಯಂತ ಶಕ್ತಿಶಾಲಿ ಪ್ರಾಕ್ಸಿಯಾದ ಹಿಜ್ಬೊಲ್ಲಾ ಬುಧವಾರ ಇಸ್ರೇಲಿ ಫಿರಂಗಿ ಸ್ಥಾನಗಳ ಮೇಲೆ ರಾಕೆಟ್‌ಗಳ ಮೂಲಕ ದಾಳಿ ಮಾಡಿದೆ ಎಂದು ಹೇಳಿದೆ. ಆದಾಗ್ಯೂ, ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಲೆಬನಾನ್‌ನಲ್ಲಿ ಎರಡು ದಿನಗಳ ಸ್ಫೋಟಗಳ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿಯ ಆತಂಕದ ನಡುವೆ ಅಮೆರಿಕ ಎಲ್ಲರಿಗೂ ಎಚ್ಚರಿಕೆ ನೀಡಿದೆ. “ನಾವು ಇನ್ನೂ ಯಾವುದೇ ರೀತಿಯ ಉಲ್ಬಣವನ್ನು ಬಯಸುವುದಿಲ್ಲ. ಮಿಲಿಟರಿ ಕಾರ್ಯಾಚರಣೆಗಳ ಮೂಲಕ ಸಮಸ್ಯೆ ಬಗೆಹರಿಸುವುದನ್ನು ನಾವು ನಂಬುವುದಿಲ್ಲ” ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹಿಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡು ಸಂಭವಿಸಿದ ಪೇಜರ್ ಸ್ಫೋಟಗಳು “ಲೆಬನಾನ್‌ನಲ್ಲಿ ಯುದ್ಧಭೀತಿಯ ಉಲ್ಬಣದ ಗಂಭೀರ ಅಪಾಯ ಸೂಚಿಸುತ್ತವೆ ಮತ್ತು ಇದನ್ನು ತಪ್ಪಿಸಲು ಎಲ್ಲ ಪ್ರಯತ್ನವನ್ನೂ ಮಾಡಬೇಕು” ಎಂದು ಹೇಳಿದ್ದಾರೆ.
ಲೆಬನಾನ್‌ನಲ್ಲಿ ನಡೆದ ಪೇಜರ್ ಸ್ಫೋಟಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಸಭೆ ಸೇರಲಿದೆ.
2023 ರ ಅಕ್ಟೋಬರ್ 7 ರಂದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ತನ್ನ ಮಿತ್ರ ಹಮಾಸ್ ಗುಂಪು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ಮಾಡಿದ ನಂತರ ಗಾಜಾದಲ್ಲಿ ಯುದ್ಧವು ಸ್ಫೋಟಗೊಂಡ ನಂತರ ಇಸ್ರೇಲ್ ಮತ್ತು ಹಿಜ್ಬೊಲ್ಲಾ ಲೆಬನಾನಿನ ಗಡಿಯಾದ್ಯಂತ ಹೋರಾಡುತ್ತಿವೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 5 ದಿನ ಲಾಕ್‌ಡೌನ್‌.. ಶಾಲಾ-ಕಾಲೇಜು ಬಂದ್‌; ಮದುವೆ-ಸಮಾರಂಭ ಬ್ಯಾನ್‌, ಭದ್ರತೆ ಸೇನೆ ನಿಯಂತ್ರಣಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement