ಇದಕ್ಕಿದ್ದಂತೆ ಬಾಯ್ತೆರೆದ ರಸ್ತೆಯು ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸೆಪ್ಟಿಕ್ ಟ್ಯಾಂಕ್ ವಾಹನವನ್ನು ಇಡಿಯಾಗಿ ಆಪೋಶನ ತೆಗೆದುಕೊಂಡ ಘಟನೆ ಶುಕ್ರವಾರ ಪುಣೆಯ ಲಕ್ಷ್ಮೀ ರಸ್ತೆಯ ಸಮಾಧಾನ ಚೌಕದ ಬಳಿ ನಡೆದಿದೆ.
ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ತಕ್ಷಣವೇ ವಾಹನದಿಂದ ಜಿಗಿದು ಪಾರಾಗಿದ್ದಾನೆ.
ಘಟನೆ ವರದಿಯಾದ ನಂತರ ಅಗ್ನಿಶಾಮಕ ದಳದ 20 ಜವಾನರು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಆಗಮಿಸಿದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಪೌರಕಾರ್ಮಿಕರ ಸ್ವಚ್ಛತಾ ವಾಹನ ನಿಂತಿರುವುದನ್ನು ಕಾಣಬಹುದು. ಆ ರಸ್ತೆಯಲ್ಲಿ ವಿದ್ಯಾರ್ಥಿಗಳು ಕೂಡ ಹಾದು ಹೋಗುತ್ತಾರೆ. ಚಾಲಕನು ಟ್ರಕ್ ಅನ್ನು ಆವರಣದಿಂದ ಹೊರಗೆ ತೆಗೆದುಕೊಳ್ಳುತ್ತಿರುವಾಗ, ಭೂಮಿಯ ಒಂದು ಭಾಗವು ಇದ್ದಕ್ಕಿದ್ದಂತೆ ಕುಸಿಯಿತು ಮತ್ತು ದೊಡ್ಡ ಗುಂಡಿಯಾಗಿ ಮಾರ್ಪಟ್ಟಿತು. ಟ್ರಕ್‌ನ ಹಿಂದಿನ ಚಕ್ರಗಳು ಅದರಲ್ಲಿ ಕುಸಿಯುತ್ತ ಹೋಯಿತು. ಸೆಕೆಂಡ್‌ಗಳಲ್ಲಿ, ಭೂಮಿ ಕುಸಿದಂತೆ ಇಡೀ ಟ್ರಕ್ ಅನ್ನು ಆ ಗುಂಡಿಯು ಅಪೋಶನ ತೆಗೆದುಕೊಂಡಿತು.
ಚಾಲಕನು ತನ್ನನ್ನು ರಕ್ಷಿಸಿಕೊಳ್ಳಲು ಬೃಹತ್ ಗುಂಡಿಯಲ್ಲಿ ಟ್ರಕ್ ಕೆಳಗೆ ಹೋಗುತ್ತಿರುವಾಗಲೇ ಜಿಗಿದು ಪಾರಾಗಿದ್ದಾನೆ. ಚಾಲಕನಿಗೆ ಟ್ರಕ್ ಅನ್ನು ಆವರಣದಿಂದ ಹೊರತೆಗೆಯಲು ಸಹಾಯ ಮಾಡುತ್ತಿದ್ದ ವ್ಯಕ್ತಿಯು ಸಹಾಯ ಮಾಡಲು ಓಡುತ್ತಿರುವುದನ್ನು ಸಹ ನೋಡಬಹುದು. ಅದೃಷ್ಟವಶಾತ್ ಯಾರು ಗಾಯಗೊಂಡಿಲ್ಲ ಎಂದು ವರದಿಯಾಗಿದೆ.
ಘಟನೆಯ ಕುರಿತು ಪುರಸಭೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದ್ದಕ್ಕಿದ್ದಂತೆ ಭೂಮಿ ಕುಸಿದು ಬೃಹತ್ ಗುಂಡಿಯಾಗಲು ಕಾರಣವೇನು ಎಂಬುದರ ಬಗ್ಗೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಅಲ್ಲಿನ ನಿವಾಸಿಗಳು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ಘಟನೆಗಳನ್ನು ತಡೆಯಲು ತಕ್ಷಣವೇ ಸಮರ್ಪಕ ದುರಸ್ತಿಗೆ ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ