ವೀಡಿಯೊ…| ಶಿರೂರು ಗುಡ್ಡ ಕುಸಿತದ ದುರಂತ ; 71 ದಿನಗಳ ಬಳಿಕ ನಾಪತ್ತೆಯಾಗಿದ್ದ ಲಾರಿ-ಚಾಲಕನ ಮೃತದೇಹ ಪತ್ತೆ

ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಲಾರಿಯಲ್ಲಿ ಚಾಲಕ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈವರೆಗೆ ಒಂಬತ್ತು ಮೃತದೇಹ ಪತ್ತೆಯಾದಂತಾಗಿದೆ.
ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಅವರು ನೀಡಿದ್ದ ನಿರ್ದೇಶನದಂತೆ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷ್ಮಣ ನಾಯ್ಕ ಅವರ ಅಂಗಡಿ ಇದ್ದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಿ ಕೇರಳದ ಭಾರತ್ ಬೆಂಜ್ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಶೋಧ ಕಾರ್ಯ ನಡೆಸುತ್ತಿರುವ ತಂಡ ಯಶಸ್ವಿಯಾಗಿದೆ.

ಎರಡು ತಿಂಗಳ ಹಿಂದೆ ಶಿರೂರು ಗುಡ್ಡ ಕುಸಿತ ಸಂಭವಿಸಿದ ವೇಳೆ ಜುಲೈ 16ರಂದು ಗುಡ್ಡ ಕುಸಿತ ವೇಳೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಸಹಿತ ಕೇರಳ ಕೊಯಿಕೋಡ್ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಚಹಾ ಕುಡಿಯಲು ಗಂಗಾವಳಿ ನದಿ ತೀರದ ಹೋಟೆಲ್ ಬಳಿ ಲಾರಿ ನಿಲ್ಲಿಸಿದ್ದರು. ಸುಮಾರು 71 ದಿನ ಕೇರಳದ ಲಾರಿ ಹುಡುಕಾಟ ರಕ್ಷಣಾ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೇರಳ ಸರ್ಕಾರದ ಸಚಿವರು, ಶಾಸಕರು, ಸಂಸದರು ಮತ್ತು ಸಾಕಷ್ಟು ಪ್ರಮಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಪ್ರತಿ ಬಾರಿಯ ಕಾರ್ಯಾಚರಣೆ ಸಂದರ್ಭದಲ್ಲಿ ಆಗಮಿಸಿ ಕೇರಳದ ಲಾರಿಯ ಪತ್ತೆಗೆ ಒತ್ತಡ ಹಾಕಿದ್ದರು. ಇದೀಗ ಗಂಗಾವಳಿ ನದಿ ಆಳದಲ್ಲಿ ಮಣ್ಣು, ಕಲ್ಲಿನ ಅಡಿ ನುಜ್ಜುಗುಜ್ಜದ ಸ್ಥಿತಿಯಲ್ಲಿ ಭಾರತ ಬೆಂಜ್ ಕಂಪನಿ ಲಾರಿಯೊಂದಿಗೆ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಗಂಗಾವಳಿ ನದಿಯಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚರಣೆ ವೇಳೆ ಬೃಹತ್ ವಸ್ತು ಪತ್ತೆಯಾಗಿತ್ತು. ಹಾಗೂ ಲಾರಿಯ ಕೆಲವು ಅವಶೇಷಗಳು ಪತ್ತೆಯಾಗಿದ್ದವು. ಅಲ್ಲದೆ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿಯ ಬಿಡಿಭಾಗ ಕೂಡ ದೊರೆತಿತ್ತು. ಇಂದು, ಬುಧವಾರ ಬೆಳಿಗ್ಗೆ ಸಹ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಮಶಿನ್ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದು, ಕಾರ್ಯಾಚರಣೆ ವೇಳೆ ಲಾರಿಯನ್ನು ಮೇಲಕ್ಕೆ ಎತ್ತಲಾಗಿದೆ. ಈಗ ಭಾರತ್ ಬೆಂಜ್ ಲಾರಿ ಸಿಕ್ಕಿದೆ. ಲಾರಿಯನ್ನು ಬಾರ್ಜ್​ನಲ್ಲಿರುವ ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದು ಲಾರಿ ಮುಂಭಾಗ ಹಾಗೂ ಚಾಲಕನ‌ ಮೃತದೇಹ ಗೋಚರವಾಗಿದೆ.

ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದ್ದ ಭೀಕರ ಗುಡ್ಡ ಕುಸಿತ ದುರಂತದಲ್ಲಿ 11 ಮಂದಿ ನಾಪತ್ತೆಯಾಗಿದ್ದರು. ಅವುಗಳ ಪೈಕಿ ಎಂಟು ಮಂದಿಯ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಜಕೇರಳದ ಅರ್ಜುನನ್‌ ಮೃತದೇಹ ಪತ್ತೆಯಾಗಿದ್ದು, ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಮೃತದೇಹ ಪತ್ತೆಯಾಗಬೇಕಿದೆ.

ಪ್ರಮುಖ ಸುದ್ದಿ :-   ವಿಪರೀತ ಮಳೆ: ನಾಳೆ (ಅ.16) ಬೆಂಗಳೂರಿನ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ

4.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement