ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಣ್ಣೇಮಠದ ಸಂಕನ ಕೇರಿಯ ಗೋಪಾಲ ಪಟಗಾರ ಎನ್ನುವವರ ಮನೆಗೆ ಭಾನುವಾರ ಮುಂಜಾನೆ ಬಂದಿದ್ದ ಹೆಬ್ಬಾವನ್ನು ಸ್ಥಳೀಯ ಉರಗ ತಜ್ಞ ಪವನ ನಾಯ್ಕ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಹೆಬ್ಬಾವು ಸುಮಾರು 12-13 ಅಡಿ ಉದ್ದ ಇದೆ. ಭಾನುವಾರ ಮುಂಜಾನೆ ಈ ಹಾವು ಹಣ್ಣೇಮಠದ ಸಂಕನ ಕೇರಿಯ ಗೋಪಾಲ ಪಟಗಾರ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿದೆ. ಹಾವನ್ನು ನೋಡಿ ಮನೆಯವರು ಹಾಗೂ ಅಕ್ಕಪದ್ದವರು ಕ್ಷಣ ಕಾಲ ಆತಂಕಿತರಾಗಿದ್ದಾರೆ. ಹೆಬ್ಬಾವು ಮನೆಯ ಗೋಡೆಯ ಇಟ್ಟಟ್ಟಾದ ಜಾಗದಲ್ಲಿ ಸೇರಿಕೊಂಡಿತ್ತು. ನಂತರ ಅವರು ಉರಗ ತಜ್ಞ ಪವನ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಆಗಮಿಸಿದ ಪವನ ನಾಯ್ಕ ಅವರು ಹೆಬ್ಬಾವನ್ನು ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ.
ಹೆಬ್ಬಾವು ಜನವಸತಿ ಪ್ರದೇಶಗಳಿಗೆ ಬರುವುದು ಕಡಿಮೆ. ಈ ಹೆಬ್ಬಾವು ಆಹಾರವನ್ನು ಹುಡುಕುತ್ತ ಜನವಸತಿ ಪ್ರದೇಶಕ್ಕೆ ಬಂದಿರಬಹುದು ಎಂದು ಪವನ ನಾಯ್ಕ ಹೇಳುತ್ತಾರೆ. ಯಾವುದೇ ಹಾವಾದರೂ ಅದಕ್ಕೆ ಅಪಾಯ ಉಂಟಾದ ಹೊರತು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ. ಹಾವುಗಳು ಸಹ ಪರಿಸರದ ಒಂದು ಭಾಗ. ಜನರು ಹಾವುಗಳಿಗೆ ತೊಂದರೆ ನೀಡಬಾರದು ಎಂದು ಅವರು ಹೇಳುತ್ತಾರೆ.
ಜನರಿಗೆ ಹೆಬ್ಬಾವು (ಪೈಥಾನ್) ಮತ್ತು ಕೊಳಕುಮಂಡಲ (ವೈಪರ್) ಹಾವಿನ ಬಗ್ಗೆ ತಿಳಿವಳಿಕೆ ಇರಬೇಕಾಗುತ್ತದೆ. ಹೆಬ್ಬಾವಿನಂತೆ ಕಾಣುವ ಕೊಳಕು ಮಂಡಲದ ಬಗ್ಗೆ ಬಹುತೇಕರು ಗೊಂದಲ ಮಾಡಿಕೊಳ್ಳುತ್ತಾರೆ. ಸುಮಾರು 6.5-7 ಅಡಿಗಳಷ್ಟು ಅಡಿಗಳಷ್ಟು ಉದ್ದ ಬೆಳೆಯುವ ಕೊಳಕು ಮಂಡಲ (ವೈಪರ್) ಅತ್ಯಂತ ಅಪಾಕಾರಿ ಹಾವು. ಕರಾವಳಿ ಭಾಗದಲ್ಲಿ ಕೊಳಕು ಮಂಡಲದ ಸಂಖ್ಯೆಯೂ ಹೆಚ್ಚಿದ್ದು ಇದು ಕಚ್ಚಿ ದರೆ ದೇಹದ ಮಾಂಸಖಂಡಗಳು ಕೊಳೆಯುತ್ತ ಹೋಗುತ್ತದೆ ಎಂದು ಪವನ ನಾಯ್ಕ ಹೇಳುತ್ತಾರೆ.
ಹೆಬ್ಬಾವು ಹಾಗೂ ಕೊಳಕುಮಂಡಲದ ನಡುವಿನ ವ್ಯತ್ಯಾಸವನ್ನು ಅದರ ತಲೆಯ ಭಾಗವನ್ನು ನೋಡಿ ಕಂಡುಹಿಡಿಯ ಬೇಕಾಗುತ್ತದೆ. ನಾಗರ ಹಾವಿಗೆ ವೈಪರ್ ತುಂಬಾ ಇಷ್ಟ ವಾದ ಆಹಾರ. ಇತ್ತೀಚಿಗೆ ಇದರ ಸಂತತಿ ಕಡಿಮೆ ಯಾಗುತ್ತಿದೆ. ನಾಗರ ಹಾವು ಈ ಕೊಳಕು ಮಂಡಲ ಹಾವು ಹಾಗೂ ಇದರ ಮರಿ ಮೊಟ್ಟೆಗಳನ್ನು ತಿನ್ನುತ್ತವೆ ಎಂದು ಪವನ ಹೇಳುತ್ತಾರೆ. ಹೆಬ್ಬಾವು ಮತ್ತು ಕೊಳಕು ಮಂಡಲದ ನಡುವಿನ ವ್ಯತ್ಯಾಸ ತಿಳಿಯದೆ ಅದನ್ನು ಮುಟ್ಟಲು ಹೋಗಬಾರದು ಎಂದು ಅವರು ಹೇಳುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ