ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಮೂವರು ದರೋಡೆಕೋರರನ್ನು ತನ್ನ ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಕಳ್ಳರು ಬಲವಂತವಾಗಿ ಒಳಗೆ ಹೋಗಲು ಪ್ರಯತ್ನಿಸುತ್ತಲೇ ಇದ್ದರೂ ಬಾಗಿಲು ಒತ್ತಿ ಹಿಡಿದ ಮಹಿಳೆ ದುಷ್ಕರ್ಮಿಗಳು ಒಳಗೆ ಬರದಂತೆ ತಡೆದಿದ್ದಾರೆ. ದರೋಡೆಕೋರರು ಮನೆಗೆ ಪ್ರವೇಶಿಲು ಯತ್ನಿಸಿದ್ದ ಸಮಯದಲ್ಲಿ ಮಹಿಳೆ ಮನದೀಪ್ ಕೌರ್ ಅವರ ಪತಿ ಮನೆಯಲ್ಲಿ ಇರಲಿಲ್ಲ. ಮನದೀಪ್ ಕೌರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ದರೋಡೆಕೋರರು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಮನದೀಪ್ ಕೌರ್ ತಡೆದಿರುವುದನ್ನು ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದಿವೆ.ಮನದೀಪ್ ಕೌರ್ ಅವರ ಪತಿ ಜಗಜೀತ್ ಸಿಂಗ್ ಆಭರಣ ವ್ಯಾಪಾರಿಯಾಗಿದ್ದಾರೆ. ಹೀಗಾಗಿ ದರೋಡೆಕೋರರು ಅವರ ಮನೆಯನ್ನೇ ಟಾರ್ಗೆಟ್ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸಿಸಿಟಿವಿ ಫೂಟೇಜ್ ಪ್ರಕಾರ, ಸೋಮವಾರ ಸಂಜೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ತನ್ನ ಮನೆಯ ಬಳಿ ಮೂವರು ಮುಸುಕುಧಾರಿ ವ್ಯಕ್ತಿಗಳನ್ನು ಗಮನಿಸಿದಾಗ ಮಹಿಳೆ ಬಟ್ಟೆಗಳನ್ನು ಒಣಗಿಸುತ್ತಿರುವಾಗಿ ಕೌರ್ ಹೇಳಿದ್ದಾರೆ. ದರೋಡೆಕೋರರು ಮನೆಯ ಗೋಡೆ ಎಷ್ಟು ಎತ್ತರವಿದೆ ಅಂದಾಜು ಮಾಡಿದರು. ಹಾಗೂ ನಂತರ ಗೋಡೆ ಏರಿ ಮುಖ್ಯ ಬಾಗಿಲನ್ನು ಸಮೀಪಿಸಿದರು. ಮಹಿಳೆ ತಕ್ಷಣವೇ ಬಾಗಿಲನ್ನು ಲಾಕ್ ಮಾಡಲು ಧಾವಿಸಿದರು. ಆದರೆ ದರೋಡೆಕೋರರು ಒಳಗೆ ಬರಲು ಬಾಗಿಲನ್ನು ಬಲವಾಗಿ ತಳ್ಳಲು ಪ್ರಾರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳು ದರೋಡೆಕೋರರು ಬಾಗಿಲನ್ನು ತಳ್ಳುತ್ತಿರುವಾಗ ಮನದೀಪ್ ಕೌರ್ ತನ್ನ ಎಲ್ಲ ಶಕ್ತಿ ಹಾಕಿ ಬಾಗಿಲು ತೆರೆಯದಂತೆ ತಡೆಹಿಡಿದಿದ್ದನ್ನು ತೋರಿಸುತ್ತದೆ. ಕೊನೆಗೂ ,ಹಿಳೆ ಬಾಗಿಲು ಲಾಕ್ ಮಾಡಲು ಯಶಸ್ವಿಯಾಗುತ್ತಾರೆ. ನಂತರ ಬಾಗಿಲನ್ನು ಮತ್ತಷ್ಟು ಭದ್ರಪಡಿಸಲು ಸೋಫಾವನ್ನು ಎಳೆದು ಬಾಗಿಲ ಮುಂದೆ ಇಡುತ್ತಾರೆ. ದರೋಡೆಕೋರರು ಮನೆಯೊಳಗೆ ಬರಲು ಯತ್ನಿಸುತ್ತಿದ್ದಾರೆ ಎಂದು ನೆರೆಹೊರೆಯವರನ್ನು ಎಚ್ಚರಿಸಲು ಕೌರ್ ಕೂಗುತ್ತಲೇ ಇದ್ದರು.
ಈ ಘಟನೆಯಿಂದ ಕಂಗಾಲಾಗಿರುವ ಆಕೆಯ ಪುಟ್ಟ ಮಗ ಮತ್ತು ಮಗಳು ಕೂಡ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಗಿಲು ಭದ್ರವಾಗಿದೆಯೇ, ದರೋಡೆಕೋರರು ಪರಾರಿಯಾಗಿದ್ದಾರೆಯೇ ಎಂದು ನೋಡಲು ನಿರಂತರವಾಗಿ ಕಿಟಕಿಗಳನ್ನು ನೋಡುತ್ತಿದ್ದ ಕೌರ್ ಸಹಾಯಕ್ಕಾಗಿ ಫೋನ್ ಕರೆಗಳನ್ನು ಮಾಡುವುದಕ್ಕೆ ಮೊಬೈಲ್ ತೆಗೆದುಕೊಂಡಿದ್ದಾರೆ. ಎರಡು ಕ್ಯಾಮೆರಾಗಳು ಮೂವರು ದರೋಡೆಕೋರರು ಮುಖ್ಯ ಬಾಗಿಲನ್ನು ಬಲವಾಗಿ ತಳ್ಳುತ್ತಿರುವುದನ್ನು ಸೆರೆಹಿಡಿದಿದೆ. ದರೋಡೆಕೋರರು ಬಲವಂತವಾಗಿ ಒಳಗೆ ಹೋಗಲು ಪ್ರಯತ್ನಿಸುವುದು ಮತ್ತು ಕೌರ್ ಕಿರುಚುವುದು ಕೇಳಿಸುತ್ತದೆ. ನಂತರ ದರೋಡೆಕೋರರು ಮನೆಯ ಗೇಟ್ ಮೂಲಕ ಪರಾರಿಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ ತನ್ನ ಮಕ್ಕಳು ಆಘಾತಕ್ಕೊಳಗಾಗಿದ್ದಾರೆ. “ಅವರನ್ನು (ದರೋಡೆಕೋರರನ್ನು) ಹಿಡಿದು ಶಿಕ್ಷಿಸಬೇಕು” ಎಂದು ಹೇಳಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿ ಎ.ಕೆ. ಸೋಹಿ ಅವರು ದರೋಡೆ ಯತ್ನದ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಅಪರಾಧಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಶೀಗ್ರವೇ ದುಷ್ಕರಮಿಗಳು ಹಿಡಿಯುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ