ಚೆನ್ನೈ: ಭಾನುವಾರ ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಪಡೆಯ (IAF) ವೈಮಾನಿಕ ಪ್ರದರ್ಶನದ ವೇಳೆ ನಿರ್ಜಲೀಕರಣ (dehydration)ದಿಂದಾಗಿ ಕನಿಷ್ಠ ಐವರು ಪ್ರೇಕ್ಷಕರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 100 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡು ಆರೋಗ್ಯ ಇಲಾಖೆಯ ಪ್ರಕಾರ, 93 ಜನರು ಶಾಖದ ಹೊಡೆತ ಮತ್ತು ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಅಗತ್ಯ ವೈದ್ಯಕೀಯ ನೆರವು ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ಭಾರತೀಯ ವಾಯುಪಡೆಯ ವೈಮಾನಿಕ ಪರಾಕ್ರಮದ ರೋಮಾಂಚಕ ಸಾಹಸದ ಪ್ರದರ್ಶನಕ್ಕೆ ಉದ್ದೇಶಿಸಲಾದ ವೈಮಾನಿಕ ಪ್ರದರ್ಶನವು ಹೆಚ್ಚಿನ ತಾಪಮಾನ ಮತ್ತು ಕಿಕ್ಕಿರಿದು ತುಂಬಿದ ಪಾಲ್ಗೊಂಡವರ ಸಂಯೋಜನೆಯಿಂದಾಗಿ ದುರಂತವಾಗಿ ಪರಿಣಮಿಸಿತು.
ಉತ್ಸಾಹಭರಿತ ಜನರು ಮರೀನಾ ಕಡಲತೀರದ ಮರಳಿನಲ್ಲಿ ಜಮಾಯಿಸಿದರು. ಅನೇಕರು ಸುಡುವ ಸೂರ್ಯನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದಿದ್ದರು, ಉತ್ತಮ ಸ್ಥಳವನ್ನು ಭದ್ರಪಡಿಸಿಕೊಳ್ಳಲು ಬೆಳಿಗ್ಗೆ 8 ಗಂಟೆಯಿಂದಲೇ ಕಾಯುತ್ತಿದ್ದರು. ಬೆಳಗ್ಗೆ 11 ಗಂಟೆಗೆ ಆರಂಭವಾದ ವೈಮಾನಿಕ ಪ್ರದರ್ಶನ ಮಧ್ಯಾಹ್ನ 1 ಗಂಟೆಯವರೆಗೆ ಮುಂದುವರೆಯಿತು. 2024ರ ಬಹು ನಿರೀಕ್ಷಿತ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಸುಮಾರು 15 ಲಕ್ಷ ಜನರು ಬೀಚ್‌ನಲ್ಲಿ ಜಮಾಯಿಸಿದ್ದರು ಎಂದು ಅಂದಾಜಿಸಲಾಗಿದೆ.
ಚೆನ್ನೈ ಸ್ತಬ್ಧ…
ಐಎಎಫ್ (IAF) ಸಂಭ್ರಮಾಚರಣೆಯು ಹೆಚ್ಚಿನ ತಾಪಮಾನ ಮತ್ತು ಅತಿಯಾದ ಜನಸಂದಣಿಯ ಸಂಯೋಜನೆಯಿಂದ ದುರಂತವಾಗಿ ಮಾರ್ಪಟ್ಟಿತು. ವರದಿಗಳ ಪ್ರಕಾರ, ಭಾರೀ ಜನಸಂದಣಿಯಿಂದಾಗಿ ಜನರು ಉಸಿರಾಟದ ತೊಂದರೆಯಾಯಿತು ಮತ್ತು ಸುಡುವ ಬಿಸಿಲು ಮತ್ತು ಭಾರೀ ಜನಸಂದಣಿಯಿಂದಾಗಿ ಒಟ್ಟು 230 ಜನರು ಮೂರ್ಛೆ ಹೋದರು.
ಕಾರ್ಯಕ್ರಮ ಮುಗಿಸಿ ಮನೆಗೆ ಮರಳಲು ಜನಸಾಗರದಿಂದಾಗಿ ನಗರದ ಹಲವು ಭಾಗಗಳು ಸ್ತಬ್ಧಗೊಂಡವು. “ಕಾಲ್ತುಳಿತದಂತಹ ಪರಿಸ್ಥಿತಿ ಮತ್ತು ಸುಡುವ ಬಿಸಲಿನ ಶಾಖದಿಂದಾಗಿ ಸುಮಾರು ಒಂದು ಡಜನ್ ಜನರು ಮರೀನಾದಲ್ಲಿ ಮೂರ್ಛೆ ಹೋದರು ಮತ್ತು ಅವರಿಗೆ ಸರ್ಕಾರಿ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಎಫ್ ವಿಮಾನಗಳ ವೈಮಾನಿಕ ಪ್ರದರ್ಶನವು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಂಡ ಸುಮಾರು ಮೂರು ಗಂಟೆಗಳ ನಂತರ ಮರೀನಾ ಬೀಚ್ ಬಳಿ ಸಂಚಾರವನ್ನು ಪುನಃಸ್ಥಾಪಿಸಲಾಯಿತು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ನೇತೃತ್ವದ ಸರ್ಕಾರದ ಅಸಮರ್ಪಕ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ವಾಗ್ದಾಳಿ ನಡೆಸಿದರು.
“ಇಂದಿನ ಕಾರ್ಯಕ್ರಮದಲ್ಲಿ, ಆಡಳಿತಾತ್ಮಕ ವ್ಯವಸ್ಥೆಗಳು ಮತ್ತು ಜನಸಂದಣಿ ಮತ್ತು ಟ್ರಾಫಿಕ್ ಅನ್ನು ಸರಿಯಾಗಿ ನಿರ್ವಹಿಸಲಾಗಲಿಲ್ಲ, ಏಕೆಂದರೆ ನಿಯಂತ್ರಿಸಲು ಪೊಲೀಸ್ ಬಲವೂ ಅಸಮರ್ಪಕವಾಗಿತ್ತು. ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿ, ಕುಡಿಯಲು ನೀರು ಕೂಡ ಸಿಗದೆ, ಬಿಸಿಲ ತಾಪಕ್ಕೆ ತುತ್ತಾಗಿ ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ 5 ಮಂದಿ ಸಾವಿಗೀಡಾಗಿರುವ ಸುದ್ದಿ ಆಘಾತಕಾರಿಯಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ತೀವ್ರವಾದ ಸಂತಾಪ. ಇಂತಹ ಮಹತ್ವದ ಕಾರ್ಯಕ್ರಮವನ್ನು ಸರಿಯಾಗಿ ಸಂಘಟಿಸಲು ವಿಫಲವಾಗಿರುವ ಡಿಎಂಕೆ ಸರ್ಕಾರಕ್ಕೆ ನನ್ನ ಖಂಡನೆ ಎಂದು ಹೇಳಿದ್ದಾರೆ.
ವೈಮಾನಿಕ ಪ್ರದರ್ಶನ
ಭಾರತೀಯ ವಾಯುಪಡೆಯ 92 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತೀಯ ರಕ್ಷಣಾ ಪಡೆಯ ವಾಯು ವಿಭಾಗವು ವೈಮಾನಿಕ ಪ್ರದರ್ಶನವನ್ನು ನಡೆಸಿತು.
ಲೈಟ್‌ಹೌಸ್ ಮತ್ತು ಚೆನ್ನೈ ಬಂದರಿನ ನಡುವಿನ ಮರೀನಾ ಬೀಚ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನಕ್ಕೆ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರಪ್ರೀತ್ ಸಿಂಗ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಚೆನ್ನೈ ಮೇಯರ್ ಆರ್. ಪ್ರಿಯಾ ಮತ್ತು ಇತರ ಗಣ್ಯರಿದ್ದರು.
ವೈಮಾನಿಕ ಪ್ರದರ್ಶನವು ವಿಶೇಷ ಗರುಡ್ ಫೋರ್ಸ್ ಕಮಾಂಡೋಗಳ ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಒಳಗೊಂಡಿತ್ತು.
ಸುಮಾರು 72 ವಿಮಾನಗಳು ಏರ್ ಡಿಸ್ಪ್ಲೇಯಲ್ಲಿ ಭಾಗವಹಿಸಿದ್ದು, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಲು ಸಜ್ಜಾಗಿದೆ. ಸೂಪರ್‌ಸಾನಿಕ್ ಫೈಟರ್ ಜೆಟ್‌ಗಳಾದ ರಫೇಲ್ ಸೇರಿದಂತೆ ಸುಮಾರು 50 ವಿಮಾನಗಳು ಜ್ವಾಲೆಗಳನ್ನು ಸುರಿಸುತ್ತಾ ವಿವಿಧ ರಚನೆಗಳಲ್ಲಿ ತೊಡಗಿಕೊಂಡವು. ಹೆರಿಟೇಜ್ ಏರ್‌ಕ್ರಾಫ್ಟ್ ಡಕೋಟಾ ಮತ್ತು ಹಾರ್ವರ್ಡ್, ತೇಜಸ್, ಎಸ್‌ಯು-30, ಮತ್ತು ಸಾರಂಗ್ ಕೂಡ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ಸುಖೋಯ್ ಸು-30 ಫೈಟರ್ ಜೆಟ್ “ಲೂಪ್-ಟಂಬಲ್-ಯಾವ್” ಕುಶಲತೆಯನ್ನು ಪ್ರದರ್ಶಿಸಿತು. ಜನಸಮೂಹವನ್ನು ಆಕರ್ಷಿಸಲು ಸೂರ್ಯಕಿರಣ ಕೂಡ ಪ್ರದರ್ಶಿತವಾಯಿತು. ಐಎಎಫ್ ತನ್ನ ವೈಮಾನಿಕ ಪ್ರದರ್ಶನವನ್ನು ರಾಷ್ಟ್ರ ರಾಜಧಾನಿ ದೆಹಲಿಯ ಹೊರಗೆ ನಡೆಸಿದ್ದು ಇದು ಮೂರನೇ ಬಾರಿ ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ. ಅಕ್ಟೋಬರ್ 2023 ರಲ್ಲಿ, IAF ಪ್ರಯಾಗ್‌ರಾಜ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸಿತು ಮತ್ತು 2022 ರಲ್ಲಿ ಚಂಡೀಗಢದಲ್ಲಿ ನಡೆಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ