ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಕೈದಿಯೊಬ್ಬನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಮೇಲೆ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ. ಬಿಹಾರದ ಮೂಲದ ಸದ್ಯ ಬೆಳಗಾವಿ ರಾಮತೀರ್ಥನಗರ ನಿವಾಸಿ ಹಿತೇಶಕುಮಾರ ಚವಾಣ ಹಲ್ಲೆಗೆ ಒಳಗಾದ ಕೈದಿಯಾಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯಿಕ, ಸವಿನ್ ಸಿದ್ದಪ್ಪ ದಡ್ಡಿ ಮತ್ತು ಪ್ರಧಾನಿ ಶೇಖರ ವಾಗ್ಮೊಡೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೆಪ್ಟೆಂಬರ್ 30ರಂದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನಗಾ ಕೈಗಾರಿಕಾ ಪ್ರದೇಶದ ವಿನಾಯಕ ಸ್ಟೀಲ್ ಅಂಡ್ ರೋಲಿಂಗ್ ಫ್ಯಾಕ್ಟರಿ ವ್ಯವಸ್ಥಾಪಕ ಹಿತೇಶ್ ಕುಮಾರ್ ಚವಾಣ ಮತ್ತು ಆಯುಬ್ ಖಾನ್ ಪಠಾಣ ನಡುವೆ ಹಣಕಾಸು ವಿಷಯವಾಗಿ ವಾಗ್ವಾದ ನಡೆದಿತ್ತು. ಮುತ್ಯಾನಟ್ಟಿಯ ಲಕ್ಷ್ಮಣ ದಡ್ಡಿ ಮಧ್ಯಸ್ಥಿಕೆ ವಹಿಸಲು ಹೋಗಿದ್ದ. ಆಗ ಹಿತೇಶ ಕುಮಾರ ಮತ್ತು ಲಕ್ಷ್ಮಣ ದಡ್ಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಲಕ್ಷ್ಮಣ ಮತ್ತು ಆತನ ಜೊತೆಗೆ ಬಂದಿದ್ದ ದಿಲೀಪ ಕಮಜಗಿ ಎಂಬವರು ಗಾಯಗೊಂಡಿದ್ದರು. ಪೊಲೀಸರು ಹಿತೇಶಕುಮಾರ ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಆದರೆ, ಮತ್ತೊಂದು ಪ್ರಕರಣದಲ್ಲಿ ಬಂಧಿಯಾಗಿ ಜೈಲಿನಲ್ಲಿದ್ದ ಲಕ್ಷ್ಮಣ ದಡ್ಡಿ ಸಂಬಂಧಿಕರಿಗೆ ಹಲ್ಲೆ ವಿಷಯ ಗೊತ್ತಾಗಿ ಹಿತೇಶಕುಮಾರನನ್ನು ಅಕ್ಟೋಬರ್ 3 ರಂದು ಥಳಿಸಿದ್ದಾರೆ ಎನ್ನಲಾಗಿದೆ. ಹಿತೇಶಕುಮಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ