ಮುಂಬೈ : ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ಫಾರ್ಮ್‌ಹೌಸ್ ಬಳಿ ಕೊಲ್ಲಲು ₹ 25 ಲಕ್ಷದ ಸುಪಾರಿ ತೆಗೆದುಕೊಳ್ಳಲಾಗಿದೆ ಎಂದು ನವಿ ಮುಂಬೈ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ವಿರುದ್ಧ ನವಿ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಐವರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ಐವರು ಆರೋಪಿಗಳು ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ 92 ಮತ್ತು ಎಂ 16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಆಯುಧವನ್ನು ಖರೀದಿಸಲು ಸಿದ್ಧತೆ ನಡೆಸಿತ್ತು. ಇದೇ ಶಸ್ತ್ರಾಸ್ತ್ರಗಳಿಂದ ಈ ಗ್ಯಾಂಗ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿತ್ತು. ಇನ್ನು ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದರು, ಅವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಮತ್ತು ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಮಾರು 60 ರಿಂದ 70 ಜನರು ಸಲ್ಮಾನ್ ಖಾನ್ ಅವರ ಚಲನವಲನವನ್ನು ಗಮನಿಸುತ್ತಿದ್ದರು, ವಿಶೇಷವಾಗಿ ಅವರ ಬಾಂದ್ರಾ ಮನೆ, ಪನ್ವೆಲ್ ಫಾರ್ಮ್‌ಹೌಸ್ ಮತ್ತು ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ನಟ ಸಲ್ಮಾನ್ ಖಾನ್ ಅವರ ಓಡಾಟದ ಮೇಲೆ ನಿರಂತರವಾಗಿ ನಿಗಾ ಇರಿಸಲಾಗಿತ್ತು. ಅಲ್ಲದೇ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಗಸ್ಟ್ 2023 ಮತ್ತು ಏಪ್ರಿಲ್ 2024 ರ ನಡುವೆ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಬುಧವಾರವಷ್ಟೇ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಪಾಣಪತ್‌ನಿಂದ ಪ್ರಮುಖ ಆರೋಪಿ ಸುಖ್ಖಾ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಸಲ್ಮಾನ್ ಖಾನ್ ಅವರಿಗೆ ನೀಡಿರುವ ಬಿಗಿ ಭದ್ರತೆ ಮತ್ತು ಬುಲೆಟ್ ಪ್ರೂಫ್ ವಾಹನಗಳ ಕಾರಣದಿಂದಾಗಿ ಈ ಕೃತ್ಯಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೇ ಬೇಕು. ಹೀಗಾಗಿ ಬಂಧಿತ ಸುಖ್ಖಾ ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಡೋಗರ್ ನನ್ನು ವೀಡಿಯೊ ಕರೆ ಮೂಲಕ ಸಂಪರ್ಕಿಸಿ AK-47 ಮತ್ತು ಇತರ ಸುಧಾರಿತ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದ್ದ.
ಡೋಗರ್ ಶಸ್ತ್ರಾಸ್ತ್ರಗಳನ್ನು ಪೂರೈಸಲು ಒಪ್ಪಿಕೊಂಡಿದ್ದ. ಇದಕ್ಕಾಗಿ ಶೇ.50ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬಾಂದ್ರಾದಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ ಘಟನೆಯನ್ನು ಪೊಲೀಸರು ತನಿಖೆ ನಡೆಸಿದಾಗ ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಅವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ಸಂಚು ಬಯಲಾಯಿತು.
ಏತನ್ಮಧ್ಯೆ, ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ