ವಡೋದರಾ: ಇದನ್ನು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ, ಗುಜರಾತಿನಲ್ಲಿ ವ್ಯಕ್ತಿಯೊಬ್ಬರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಎಂಬ ಜೀವರಕ್ಷಕ ತಂತ್ರ ಅನುಸರಿಸುವ ಮೂಲಕ ಹಾವಿನ ಜೀವ ಉಳಿಸಿದ್ದಾರೆ.
ಗುಜರಾತಿನ ವಡೋದರಾದ ವನ್ಯಜೀವಿ ರಕ್ಷಕ ಯಶ್ ತದ್ವಿ ಎಂಬವರು ಆ ಪ್ರದೇಶದಲ್ಲಿ ಹಾವು ಸತ್ತಿರುವ ಬಗ್ಗೆ ಅವರ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಅವರು ತಕ್ಷಣವೇ ಆ ಸ್ಥಳವನ್ನು ತಲುಪಿದ ನಂತರ, ಅವರು ಹಾವಿನ ಸ್ಥಿತಿಯನ್ನು ನೋಡಿದರು, ಸುಮಾರು ಒಂದು ಅಡಿ ವಿಷಕಾರಿಯಲ್ಲದ ಚೆಕರ್ಡ್ ಕೀಲ್‌ಬ್ಯಾಕ್ ಎಂಬ ಹಾವು ಎಚ್ಚರ ಇಲ್ಲದ ಸ್ಥಿತಿಯಲ್ಲಿ ಬಿದ್ದಿತ್ತು. ಅದನ್ನು ನೋಡಿದ ಅವರಿಗೆ ಇದಕ್ಕೆ ಸಿಪಿಆರ್ ಮಾಡಿದರೆ ಅದು ಬದುಕುಳಿಯುತ್ತದೆ ಎಂದು ನಂಬಿಕೆ ಉಂಟಾಯಿತು. ಹೀಗಾಗಿ ಹಾವಿಗೆ ಸಿಪಿಆರ್ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ದೇಶ್ ಗುಜರಾತ್ ಪ್ಲಾಟ್‌ಫಾರ್ಮ್‌ನ ವರದಿಯ ಪ್ರಕಾರ, ವೃಂದಾವನ ಚಾರ್ ರಸ್ತಾ ಬಳಿ ಘಟನೆ ನಡೆದಿದ್ದು, ತಕ್ಷಣ ಉರಗ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿದೆ., ರಕ್ಷಣಾ ತಂಡದ ಸದಸ್ಯ ಯಶ್ ತದ್ವಿ ಅವರು ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ. ಅಲ್ಲಿ ಹಾವು ನಿರ್ಜೀವವಾಗಿರುವುದು ಕಂಡು ಬಂತು. ತದ್ವಿ ತಕ್ಷಣವೇ ಸಿಪಿಆರ್ ನೀಡಲು ಪ್ರಾರಂಭಿಸಿದರು. ಅಚ್ಚರಿ ಎಂದರೆ ಹಾವನ್ನು ಜೀವಂತಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ನನಗೆ ಕರೆ ಬಂದ ತಕ್ಷಣ ನಾನು ತಕ್ಷಣ ಅಲ್ಲಿಗೆ ಹೋದೆ. ಹಾವು ಸತ್ತಂತೆ ಕಾಣುವ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಆದರೆ ನಾನು ಅದನ್ನು ಹಿಡಿದಾಗ, ಅದು ಇನ್ನೂ ಜೀವಂತವಾಗಿದೆ ಎಂದು ನಾನು ಅರಿತುಕೊಂಡೆ. ನಾನು ಅದರ ಕುತ್ತಿಗೆಯನ್ನು ನನ್ನ ಕೈಯಲ್ಲಿ ತೆಗೆದುಕೊಂಡು ಅದರ ಬಾಯಿಯನ್ನು ತೆರೆದು ಮೂರು ನಿಮಿಷಗಳ ಕಾಲ ಅದರ ಬಾಯಿಗೆ ಊದುವ ಮೂಲಕ ಅದನ್ನು ಪ್ರಜ್ಞೆಗೆ ತರಲು ಪ್ರಯತ್ನಿಸಿದೆ. ಮೊದಲ ಎರಡು ಪ್ರಯತ್ನಗಳಲ್ಲಿ ಸಿಪಿಆರ್ ನೀಡಿದ ನಂತರವೂ ಅದರ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ನಾನು ಮೂರನೇ ಬಾರಿಗೆ ಸಿಪಿಆರ್ ಅನ್ನು ನೀಡಿದಾಗ ಅದು ಚಲಿಸಲು ಪ್ರಾರಂಭಿಸಿತು” ಎಂದು ಅವರು ಹೇಳಿದ್ದಾರೆ.ಹಾವು ಜೀವಂತವಾದಾಗ ನನಗೆ ತುಂಬಾ ಸಮಾಧಾನ ಮತ್ತು ಸಂತೋಷವಾಯಿತು ಮತ್ತು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಯಶ್ ತದ್ವಿ ಹೇಳಿದ್ದಾರೆ.
ಈ ಸಂಪೂರ್ಣ ಘಟನೆಗೆ ರೇಂಜ್ ಫಾರೆಸ್ಟ್ ಆಫೀಸರ್ ಕರಣ ಸಿಂಗ್ ರಜಪೂತ್ ಪ್ರತಿಕ್ರಿಯಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ CPR ಅನ್ನು ನೀಡುವುದು ಅಪಾಯಕಾರಿ, ಆದರೆ ಹಾವು ವಿಷಕಾರಿಯಲ್ಲದ ಕಾರಣ ಮತ್ತು ರಕ್ಷಕನಿಗೆ ಸಾಕಷ್ಟು ಜ್ಞಾನವಿದ್ದ ಕಾರಣ CPR ಅನ್ನು ನಡೆಸಲಾಗಿದೆ ಎಂದು ತೋರುತ್ತದೆ. ಇದು ವಿಷಕಾರಿ ಹಾವೋ ಅಥವಾ ವಿಷಕಾರಿಯಲ್ಲವೋ ಎಂದು ಕಂಡುಹಿಡಿಯುವುದು ಮುಖ್ಯ ಎಂದು ಹೇಳಿದ್ದಾರೆ ಎಂದು ನವಭಾರತ ಟೈಮ್ಸ್ ಅವರನ್ನು ಉಲ್ಲೇಖಿಸಿದೆ. ಗುಜರಾತ್‌ನಲ್ಲಿ ತದ್ವಿ ಸಮುದಾಯವು ಬುಡಕಟ್ಟು ಸಮಾಜಕ್ಕೆ ಸೇರಿದೆ. ಈ ಸಮಾಜದ ಜನರು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ