ಅಕ್ಟೋಬರ್ 9 ರಂದು 86ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರು ಸಾವಿರಾರು ಕೋಟಿ ರೂ ಮೌಲ್ಯದ ವೈಯಕ್ತಿಕ ಸಂಪತ್ತನ್ನೂ ಬಿಟ್ಟುಹೋಗಿದ್ದಾರೆ. ಅವರ ಷೇರುಪಾಲುಗಳೆಲ್ಲವನ್ನೂ ಸೇರಿಸಿದರೆ ಅವರ ಸಂಪತ್ತಿನ ಮೌಲ್ಯ 7,900 ಕೋಟಿ ರೂ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ, ಅವರು ತಮ್ಮ ಸಂಪತ್ತಿಗೆ ಉಯಿಲು (will) ಬರೆದಿಟ್ಟಿದ್ದಾರೆ.
ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಅವರ ವಿಶ್ವಾಸಿಕ ಹಾಗೂ ವಕೀಲ ಡೇರಿಯಸ್ ಖಂಬಾಟಾ ಮತ್ತು ದೀರ್ಘಕಾಲದ ನಿಕಟವರ್ತಿ ಮೆಹ್ಲಿ ಮಿಸ್ತ್ರಿ ಅವರನ್ನು ತಮ್ಮ ಉಯಿಲಿನ ಕಾರ್ಯನಿರ್ವಾಹಕರು (executors) ಎಂದು ಹೆಸರಿಸಿದ್ದಾರೆ ಹಾಗೂ ಅವರ ಮಲ-ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಭೋಯ್ ಅವರನ್ನು ರತನ್ ಟಾಟಾ ಉಯಿಲನ್ನು ಕಾರ್ಯಗತಗೊಳಿಸಲು ನೇಮಿಸಲಾಗಿದೆ.
ರತನ್ ಟಾಟಾ ಅವರ ಮರಣದ ನಂತರ, ಅವರ ಮಲ ಸಹೋದರ ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಪ್ರಕಾ ರತನ್ ಟಾಟಾ ಅವರು ಟಾಟಾ ಸನ್ಸ್‌ನಲ್ಲಿ 0.83 ಶೇಕಡಾ ಪಾಲನ್ನು ಹೊಂದಿದ್ದರು ಮತ್ತು ಅದರ ನಿವ್ವಳ ಮೌಲ್ಯ 7,900 ಕೋಟಿ ರೂಪಾಯಿಗಳಾಗುತ್ತವೆ. ಅವರು ಯಾವಾಗಲೂ ತಮ್ಮ ಸಂಪತ್ತಿನ ಗಮನಾರ್ಹ ಭಾಗವನ್ನು ದಾನದ ಉದ್ದೇಶಗಳಿಗಾಗಿ ನೀಡಲು ಬದ್ಧರಾಗಿದ್ದರು..
ಅವರ ಸಂಪತ್ತಿನ ಬಹುಪಾಲು ಭಾಗ-ಸುಮಾರು 75% ಟಾಟಾ ಸನ್ಸ್ ಷೇರುಗಳಾಗಿವೆ. ಇದರ ಜೊತೆಗೆ, ಅವರು ಓಲಾ, ಪೇಟಿಎಂ, ಫಸ್ಟ್‌ಕ್ರೈ, ಬ್ಲೂಸ್ಟೋನ್ ಮತ್ತು ಅರ್ಬನ್ ಕಂಪನಿ ಸೇರಿದಂತೆ ಸುಮಾರು ಎರಡು ಡಜನ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಕಾಲಾನಂತರದಲ್ಲಿ, ಟಾಟಾ ಈ ಕೆಲವು ಹೂಡಿಕೆಗಳಿಂದ ನಿರ್ಗಮಿಸಿದ್ದರು. ಅವರು ಮುಂಬೈನ ಕೊಲಾಬಾದಲ್ಲಿ ನಿವಾಸವನ್ನು ಹೊಂದಿದ್ದರು ಮತ್ತು ಅಲಿಬಾಗ್‌ನಲ್ಲಿ ಮನೆಯನ್ನು ಹೊಂದಿದ್ದರು.
ರತನ್ ಟಾಟಾ ಅವರ ನಿಕಟವರ್ತಿಯಾಗಿರುವ ಮೆಹ್ಲಿ ಮಿಸ್ತ್ರಿ ಅವರು 2016ರಲ್ಲಿ ಟಾಟಾ ಸನ್ಸ್ ಚೇರ್ಮನ್ ಸ್ಥಾನದಿಂದ ಉಚ್ಚಾಟಿಸಲಾಗಿದ್ದ ಸೈರಸ್ ಮಿಸ್ತ್ರಿ ಅವರ ಚಿಕ್ಕಪ್ಪನ ಮಗ. ಆದರೂ ರತನ್ ಟಾಟಾ ಮತ್ತು ಮೆಹ್ಲಿ ಮಿಸ್ತ್ರಿ ಗೆಳೆತನ ಕಡಿಮೆಯಾಗಿರಲಿಲ್ಲ. ಅವರು ರತನ್ ಟಾಟಾ ಅವರೊಂದಿಗೆ ದೃಢವಾಗಿ ನಿಂತಿದ್ದರು.
ಅಕ್ಟೋಬರ್ 2022 ರಲ್ಲಿ, ಮೆಹ್ಲಿ ಮಿಸ್ತ್ರಿ ಅವರನ್ನು ಎರಡು ಪ್ರಮುಖ ಟಾಟಾ ಟ್ರಸ್ಟ್‌ಗಳ ಮಂಡಳಿಗಳಿಗೆ ನೇಮಿಸಲಾಯಿತು. ಬಣ್ಣಗಳು, ಲಾಜಿಸ್ಟಿಕ್ಸ್, ಶಿಪ್ಪಿಂಗ್ ಮತ್ತು ಜೀವ ವಿಮೆ ಸೇರಿದಂತೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ M ಪಲ್ಲೊಂಜಿ ಗ್ರೂಪ್ ಅಡಿಯಲ್ಲಿ ಅವರು ಹನ್ನೆರಡು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.
ಮಿಸ್ತ್ರಿ ಅವರು ಬ್ರೀಚ್ ಕ್ಯಾಂಡಿ ಆಸ್ಪತ್ರೆ, ಅಡ್ವಾನ್ಸ್ಡ್ ವೆಟರ್ನರಿ ಕೇರ್ ಫೌಂಡೇಶನ್ ಮತ್ತು ಟಾಟಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸ್ಕಿಲ್ಸ್‌ನ ಮಂಡಳಿಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಮಂಡಳಿಗಳಲ್ಲಿ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಟ್ರಸ್ಟ್‌ಗಳು ಒಟ್ಟಾರೆಯಾಗಿ ಟಾಟಾ ಸನ್ಸ್‌ನ ಸುಮಾರು 52%ರಷ್ಟು ಪಾಲು ಹೊಂದಿದ್ದು, ಟಾಟಾ ಟ್ರಸ್ಟ್‌ಗಳು ಒಟ್ಟಾರೆಯಾಗಿ ಕಂಪನಿಯ 66 ಪ್ರತಿಶತ ಪಾಲನ್ನು ಹೊಂದಿವೆ. ಸಮೂಹದ ಲಿಸ್ಟೆಡ್ ಕಂಪನಿಗಳಲ್ಲಿ ಟಾಟಾ ಸನ್ಸ್‌ನ ಹಿಡುವಳಿಗಳ ಮಾರುಕಟ್ಟೆ ಮೌಲ್ಯವು 16.71 ಟ್ರಿಲಿಯನ್ ರೂ.ಗಳು ಎಂದು ಅಂದಾಜಿಸಲಾಗಿದೆ.
ರತನ್ ಟಾಟಾ ಅವರ ಮಲ-ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಭೋಯ್ ಅವರು ರತನ್ ಟಾಟಾ ಅವರ ತಾಯಿ ಸೂನೂ ಟಾಟಾ ಅವರು ಸರ್ ಜಮ್ಸೆಟ್ಜಿ ಜೆಜೀಬಾಯ್ ಅವರೊಂದಿಗೆ ಎರಡನೇ ಮದುವೆಯಾದ ನಂತರ ಜನಿಸಿದ ಪುತ್ರಿಯರಾಗಿದ್ದಾರೆ. ಇಬ್ಬರು ಸಹೋದರಿಯರು ಲೋಕೋಪಕಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರತನ್ ಟಾಟಾ ಮಲಸಹೋದರಿ ಡೀನಾ, ನಿರ್ದಿಷ್ಟವಾಗಿ, 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ರತನ್ ಟಾಟಾ ಟ್ರಸ್ಟ್‌ನ ಮಂಡಳಿಯಲ್ಲಿ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದರು. ಟಾಟಾ ಅವರು ತಮ್ಮ ಈ ಕಿರಿಯ ಸಹೋದರಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು.
ರತನ್ ಟಾಟಾ ಉಯಿಲು ಅವರ ನಿರ್ವಾಹಕರಲ್ಲಿ ಒಬ್ಬರಾದ ಡೇರಿಯಸ್ ಖಂಬಾಟಾ ಅವರು ರತನ್ ಟಾಟಾ ಅವರ ಉಯಿಲು ರಚಿಸುವಲ್ಲಿ ಸಹಾಯ ಮಾಡಿದರು ಎಂದು ನಂಬಲಾಗಿದೆ. ಅವರು ವೃತ್ತಿಪರ ಜವಾಬ್ದಾರಿಗಳಿಂದಾಗಿ 2016 ರಲ್ಲಿ ರಾಜೀನಾಮೆ ನೀಡಿದ ಏಳು ವರ್ಷಗಳ ನಂತರ ಕಳೆದ ವರ್ಷ ಎರಡು ಪ್ರಮುಖ ಟಾಟಾ ಟ್ರಸ್ಟ್‌ಗಳಲ್ಲಿ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ.
ಕಾರ್ಯನಿರ್ವಾಹಕರಾಗಿ, ಖಂಬಾಟಾ, ಮಿಸ್ತ್ರಿ ಮತ್ತು ಮಲಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಭೋಯ್ ಅವರು ರತನ್ ಟಾಟಾ ಅವರ ಅಂತಿಮ ಆಶಯಗಳನ್ನು ಪೂರೈಸುವ ಕಾನೂನುಬದ್ಧ ಜವಾಬ್ದಾರಿಯನ್ನು ಹೊಂದಿದ್ದಾರೆ, ಅನ್ವಯಿಸುವ ಕಾನೂನುಗಳಿಗೆ ಬದ್ಧರಾಗಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಹೇಳಿದೆ.
ಆಸ್ತಿ ನಿರ್ವಹಣೆಯಲ್ಲಿ ಉಯಿಲು ಎಕ್ಸಿಕ್ಯೂಟರ್‌ಗಳ ಪಾತ್ರವೇನು?
ಉಯಿಲಿನಲ್ಲಿ ನಿರ್ದಿಷ್ಟಪಡಿಸದ ಹೊರತು ಯಾವುದೇ ಹಂಚಿಕೆ ಮಾಡದ ಸ್ವತ್ತುಗಳನ್ನು ವಿವೇಚನೆಯೊಂದಿಗೆ ನಿರ್ವಹಿಸಲು ನಿರ್ವಾಹಕರು ಸಾಮಾನ್ಯವಾಗಿ ಅಧಿಕಾರ ಹೊಂದಿರುತ್ತಾರೆ. ಈ ವಿಲ್ನಲ್ಲಿ ಬರೆದಿದ್ದರೆ ಅದರ ಪ್ರಕಾರ ಆಸ್ತಿಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ವಿಲ್ನಲ್ಲಿ ಕೆಲ ಆಸ್ತಿಗಳ ಹಂಚಿಕೆ ಬಗ್ಗೆ ನಿರ್ದಿಷ್ಟಪಡಿಸದೇ ಹೋದ ಸಂದರ್ಭದಲ್ಲಿ, ವೈಯಕ್ತಿಕ ಕಾನೂನು ಪ್ರಕಾರ ಅದನ್ನು ವಿಂಗಡಿಸಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ