ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಶಾಸಕ ದೇವಾನಂದ ಸಿಂಗ್ ಚವ್ಹಾಣ ಅವರ ಪತ್ನಿ ಸುನಿತಾ ಚವ್ಹಾಣ ಅವರ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಅವರನ್ನು ಕೊಲ್ಲಾಪುರದಲ್ಲಿ ಹಾಗೂ ಗೋಪಾಲ ಅವರ ಪುತ್ರ ಅಜಯ ಜೋಶಿ ಅವರನ್ನು ಪುಣೆಯಲ್ಲಿ ಬಂಧಿಸಿದ್ದು, ಬೆಂಗಲೂರಿಗೆ ಬೆಂಗಳೂರಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಗೋಪಾಲ ಜೋಶಿ ತಲೆಮರೆಸಿಕೊಂಡಿದ್ದರು. ಗೋಪಾಲ್ ಜೋಶಿ, ಮಹಾರಾಷ್ಟ್ರದ ಕೊಲ್ಲಾಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಇಂದು, ಶನಿವಾರ ಬೆಳಿಗ್ಗೆ ಲಾಡ್ಜ್ಗೆ ತೆರಳಿ ಬಂಧಿಸಿರುವ ಪೊಲೀಸರು ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಬೆಂಗಳೂರು ಪೊಲೀಸರು ಗೋಪಾಲ್ ಜೋಶಿ, ಪುತ್ರ ಅಜಯ್ ಜೋಶಿ ಹಾಗೂ ವಿಜಯಲಕ್ಷ್ಮೀ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಪ್ರಕರಣ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಶುಕ್ರವಾರ (ಅಕ್ಟೋಬರ್ 18) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೂರು ದಶಕಗಳ ಹಿಂದೆಯೇ ತನ್ನ ಸಹೋದರ ಗೋಪಾಲ ಜೋಶಿಯಿಂದ ಬೇರ್ಪಟ್ಟಿದ್ದೇನೆ. ನಮ್ಮಿಬ್ಬರ ಸಂಬಂಧ ಕಡಿದುಕೊಂಡು ಹಲವು ವರ್ಷಗಳಾಗಿವೆ. ಸಹೋದರ ಗೋಪಾಲ ಜೋಶಿ ಜೊತೆ ಯಾವ ವ್ಯವಹಾರವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೂ ಅವರ ವಿರುದ್ಧ ಎರಡು ಸಲ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ನಾನು ಹಿಂದೆಯೇ ಗೋಪಾಲ ಜೋಶಿ ಅವರೊಂದಿಗೆ ನನ್ನ ಹೆಸರು ಲಿಂಕ್ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ತಂದಿದ್ದೇನೆ. ಅವರಿಗೂ ನನಗೂ ಸಾಮಾಜಿಕವಾಗಿ, ವ್ಯಹಹಾರಿಕವಾಗಿ ಹಾಗೂ ಆರ್ಥಿಕವಾಗಿ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಪ್ರಹ್ಲಾದ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ
ಈ ವಂಚನೆ ಪ್ರಕರಣದಲ್ಲಿ ಕೇಂದ್ರ ಪ್ರಲ್ಹಾದ ಜೋಶಿ ಹಾಗೂ ಯಾವುದೇ ಬಿಜೆಪಿ ನಾಯಕರ ಅವರ ಪಾತ್ರ ಏನೂ ಇಲ್ಲ ಎಂದು ದೂರುದಾರರಾದ ಸುನೀತಾ ಚೌಹಾಣ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡಿಸುವುದಾಗಿ ಗೋಪಾಲ ಜೋಶಿ 2 ಕೋಟಿ ರೂ. ಬೇಡಿಕೆ ಇಟ್ಟಿದ್ದು, 25 ಲಕ್ಷ ರೂ. ಹಣ ಪಡೆದಿದ್ದರು. ಆದರೆ ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ದೂರು ಕೊಡಬೇಕಾಯಿತು. ಇದರಲ್ಲಿ ಗೋಪಾಲ ಜೋಶಿ ಹೈಕಮಾಂಡ್ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೇಂದ್ರದ ಯಾವ ನಾಯಕರನ್ನೂ ನಾವು ಭೇಟಿ ಆಗಿಲ್ಲ. ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದರು. ಹೀಗಾಗಿ ನೇರವಾಗಿ ಗೋಪಾಲ ಜೋಶಿ ಅವರಿಗೆ ಹಣ ನೀಡಿದ್ದೇವೆ, ಇದರಲ್ಲಿ ಉಳಿದವರ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ