ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವ ಪೊಲೀಸ್‌ ಅಧಿಕಾರಿಗೆ 1,11,11,111 ರೂ. ಬಹುಮಾನ ಘೋಷಿಸಿದ ಕರ್ಣಿ ಸೇನೆ ; ಯಾಕೆಂದರೆ…

ನವದೆಹಲಿ : ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ನನ್ನು ಎನ್‌ಕೌಂಟರ್‌ ಮಾಡಿದ ಪೊಲೀಸರಿಗೆ ಕ್ಷತ್ರಿಯ ಕರ್ಣಿ ಸೇನೆಯು ₹ 1,11,11,111 ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ ಶೇಖಾವತ್ ಅವರು ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಎನ್‌ಕೌಂಟರ್‌ ಮಾಡಿದವರಿಗೆ ಈ ನಗದು ಬಹುಮಾನ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊದಲ್ಲಿ, ರಾಜ ಶೇಖಾವತ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ನನ್ನು ಕೊಲ್ಲುವ ಯಾವುದೇ ಪೊಲೀಸ್ ಅಧಿಕಾರಿಗೆ ಬಹುಮಾನವನ್ನು ನೀಡುವುದಾಗಿ ಹೇಳಿದ್ದಾರೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ, ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಘಟನೆಗೆ ಸಂಬಂಧ ಹೊಂದಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಸುಖದೇವ್ ಸಿಂಗ್ ಗೊಗಮೆಡಿ ಅವರ ಜೈಪುರದ ಮನೆಯಲ್ಲಿ ಚಹಾ ಸೇವಿಸುತ್ತಿದ್ದಾಗ ಹಗಲು ಹೊತ್ತಿನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಅವರೊಂದಿಗೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದರು, ಅವರ ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡರು. ಗುಂಡಿನ ಚಕಮಕಿಯಲ್ಲಿ ಶೂಟರ್‌ಗಳಲ್ಲಿ ಒಬ್ಬರಾದ ನವೀನ್ ಸಿಂಗ್ ಶೇಖಾವತ್ ಸತ್ತಿದ್ದಾನೆ.
ದಾಳಿಯ ಸ್ವಲ್ಪ ಸಮಯದ ನಂತರ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳ ಸಹವರ್ತಿ ರೋಹಿತ್ ಗೋಡಾರಾ ಎಂಬಾತ ಗೊಗಮೆಡಿ ಅವರ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ. “ನಾನು ಗೋಲ್ಡಿ ಬ್ರಾರ್ ಸಹೋದರ ರೋಹಿತ್ ಗೋದಾರಾ ಕಪುರ್ಸಾರಿ. ನಾವು ಸುಖದೇವ್ ಗೊಗಮೆಡಿ ಹತ್ಯೆಯ ಸಂಪೂರ್ಣ ಜವಾಬ್ದಾರಿ ಹೊರುತ್ತೇವೆ. ಅವರು ನಮ್ಮ ಶತ್ರುಗಳನ್ನು ಬೆಂಬಲಿಸುತ್ತಿದ್ದರು ಎಂದು ಆತ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ.
ಈ ಘಟನೆಯು ರಾಜಸ್ಥಾನದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ರಜಪೂತ ಸಮುದಾಯ ಮತ್ತು ಕರ್ಣಿ ಸೇನೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ್ದ ಗೊಗಮೆಡಿಯವರ ಹತ್ಯೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.

ರಾಜ ಶೇಖಾವತ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ, “ಲಾರೆನ್ಸ್ ಬಿಷ್ಣೋಯ್ ನಮ್ಮ ಅಮೂಲ್ಯ ರತ್ನ ಮತ್ತು ಪರಂಪರೆಯ ಅಮರ್ ಶಹೀದ್ ಸುಖದೇವ್ ಸಿಂಗ್ ಗೊಗಮೆಡಿ ಜಿ ಅವರ ಕೊಲೆಗಾರ” ಎಂದು ಹೇಳಿದ್ದಾರೆ.
ಗೊಗಮೆಡಿ ಹತ್ಯೆಯ ನಂತರ, ರಾಜಸ್ಥಾನ ಪೊಲೀಸರು ಪ್ರಮುಖ ಶಂಕಿತ ಅಶೋಕ ಮೇಘವಾಲ್ ಮತ್ತು ಇತರ ಎಂಟು ಜನರನ್ನು ಬಂಧಿಸಿದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೇತೃತ್ವದ ಬಹು-ರಾಜ್ಯ ತನಿಖೆಯು ರಾಜಸ್ಥಾನ ಮತ್ತು ಹರಿಯಾಣದ 31 ಸ್ಥಳಗಳಲ್ಲಿ ದಾಳಿ ನಡೆಸಿತು. ದಾಳಿಯ ವೇಳೆ ಎನ್‌ಐಎ ತಂಡಗಳು ಪಿಸ್ತೂಲ್‌ಗಳು, ಮದ್ದುಗುಂಡುಗಳು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಡಿಜಿಟಲ್ ವಿಡಿಯೋ ರೆಕಾರ್ಡರ್‌ಗಳು (ಡಿವಿಆರ್‌ಗಳು) ಮತ್ತು ಹಣಕಾಸಿನ ದಾಖಲೆಗಳನ್ನು ವಶಪಡಿಸಿಕೊಂಡಿವೆ.
ಆದರೆ, ಗೊಗಮೇಡಿ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಗೋಡಾರಾ ಪತ್ತೆಯಾಗಿಲ್ಲ. ಗುಪ್ತಚರ ವರದಿಗಳ ಪ್ರಕಾರ, ಗೋಡಾರಾ “ಪವನಕುಮಾರ” ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪಲಾಯನ ಮಾಡಿದ್ದಾನೆ. ಕೆನಡಾದಲ್ಲಿ ಎಲ್ಲೋ ಅಡಗಿಕೊಂಡಿದ್ದಾನೆ ಎಂದು ನಂಬಲಾದ ಗೋಡಾರಾಗೆ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಮಾಡಿದೆ. ಸುಲಿಗೆ ಮತ್ತು ಕೊಲೆ ಸೇರಿದಂತೆ ಅವನ ವಿರುದ್ಧ 32 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಗೋಡಾರಾ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಒಬ್ಬ.

ಪ್ರಮುಖ ಸುದ್ದಿ :-   ಆರ್‌.ಜಿ. ಕರ್ ಕಾಲೇಜ್‌ ವೈದ್ಯೆ ಅತ್ಯಚಾರ-ಕೊಲೆ ಪ್ರಕರಣ ; ಮಾಜಿ ಪ್ರಾಂಶುಪಾಲ ಸಂದೀಪ ಘೋಷ್‌ ಗೆ ಜಾಮೀನು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement