ವೀಡಿಯೊ…| ಚಿನ್ನಾಭರಣ ಅಂಗಡಿ ಮಾಲೀಕ-ದರೋಡೆಕೋರರ ನಡುವೆ ಗುಂಡಿನ ಚಕಮಕಿ ; 3 ಮಂದಿಗೆ ಗಾಯ

ನವದೆಹಲಿ : ಬಿಹಾರದ ಬೇಗುಸರಾಯ್‌ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಧಾರಿಗಳ ತಂಡವೊಂದು ಹಗಲು ದರೋಡೆ ನಡೆಸಿದ ನಾಟಕೀಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆಭರಣ ಅಂಗಡಿಯ ಉದ್ಯೋಗಿ ಮತ್ತು ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ, ದೀಪಾವಳಿಗೆ ಮುಂಚಿತವಾಗಿ ಧಂತೇರಸ್ ದೃಷ್ಟಿಯಿಂದ ಕಟ್ಟೆಚ್ಚರ ವಹಿಸುವಂತೆ ಕೇಳಿಕೊಂಡರೂ ಆಡಳಿತವು ಭದ್ರತೆಯನ್ನು ಒದಗಿಸಿಲ್ಲ ಎಂದು ಅಂಗಡಿ ಮಾಲೀಕ ಪ್ರಮೋದ ಪೊದ್ದಾರ್ ಆರೋಪಿಸಿದರು.

ದರೋಡೆಕೋರರು ಪ್ರವೇಶಿಸಿದಾಗ ಕೆಲವು ಗ್ರಾಹಕರು ಬಾಗಿಲಿನ ಕಡೆಗೆ ನೋಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿದೆ ಮತ್ತು ಜನರು ಹಿಂದೆ ನಿಲ್ಲುವಂತೆ ಕೂಗಿದ ದರೋಡೆಕೋರರಲ್ಲಿ ಒಬ್ಬ ಕೈಯಲ್ಲಿ ಪಿಸ್ತೂಲ್ ಹಿಡಿದು ಮಳಿಗೆಯಲ್ಲಿ ಇರಿಸಲಾಗಿದ್ದ ಆಭರಣಗಳನ್ನು ದೋಚಿದರು. ನಂತರ ಅವರು ಗಾಜಿನ ಕೌಂಟರ್‌ಗೆ ಅಡ್ಡಲಾಗಿ ಜಿಗಿದು ಕಬೋರ್ಡ್‌ನಿಂದ ಆಭರಣಗಳನ್ನು ತೆಗೆದುಕೊಂಡರು. ಇದಾದ ಬೆನ್ನಲ್ಲೇ ಗುಂಡಿನ ಚಕಮಕಿ ನಡೆದಿದೆ.
ಬೇಗುಸರಾಯ್‌ನ ಪಟೇಲ್ ಚೌಕ್‌ನಲ್ಲಿರುವ ಅಂಗಡಿಯಿಂದ ದರೋಡೆಕೋರರು ₹ 40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಪೊದ್ದಾರ್ ಹೇಳಿದ್ದಾರೆ.

“… ಅಪರಾಧಿಗಳು ಗುಂಡು ಹಾರಿಸಿದರು, ನಮ್ಮ ಉದ್ಯೋಗಿ ಅಜಯ ಅವರಿಗೆ ಗಾಯವಾಯಿತು. ಇದರ ನಂತರ, ನಾನು ಇಬ್ಬರು ಅಪರಾಧಿಗಳ ಮೇಲೆ ಗುಂಡು ಹಾರಿಸಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ಪೊದ್ದಾರ್ ಹೇಳಿದರು.
“ನಾವು ಧನ್ತೇರಸ್‌ಗಾಗಿ ತಯಾರಿ ನಡೆಸುತ್ತಿದ್ದೇವೆ ಮತ್ತು ಈಗಾಗಲೇ ಆಡಳಿತಕ್ಕೆ ತಿಳಿಸಿದ್ದೆವು, ಆದರೆ ಅವರು ಯಾವುದೇ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ, ಘಟನೆಯ ನಂತರ, ಹೆಚ್ಚಿನ ಸಂಖ್ಯೆಯ ಪೊಲೀಸರು ಇಲ್ಲಿಗೆ ಬಂದಿದ್ದಾರೆ” ಎಂದು ಅವರು ಹೇಳಿದರು.
ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement