ವೀಡಿಯೊ…| ಅಥಣಿಯಲ್ಲಿ ಪುಟ್ಟ ಮಕ್ಕಳ ಅಪಹರಣಕ್ಕೆ ಯತ್ನ : ದುಷ್ಕರ್ಮಿಯ ಕಾಲಿಗೆ ಗುಂಡು ಹೊಡೆದು ಪುಟಾಣಿಗಳ ರಕ್ಷಿಸಿದ ಪೊಲೀಸರು

ಬೆಳಗಾವಿ : ಮನೆಗೆ ನುಗ್ಗಿ ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಮೇಲೆ ಅಥಣಿ ಪೊಲೀಸರು ಫೈರಿಂಗ್ ಮಾಡಿ ಇಬ್ಬರು ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಗುರುವಾರ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ರವಿಕಿರಣ ಕಮ್ಲಾಕರ್, ಬಿಹಾರದ ಮೂಲದ ಸದ್ಯ ಮುಂಬೈ ನಿವಾಸಿ ಶಾರುಖ್ ಶೇಖ್ ಮತ್ತು ಕೊಲ್ಲಾಪುರ ಜಿಲ್ಲೆಯ ಸಂಬಾ ಕಾಂಬಳೆ ಬಂಧಿತ ಆರೋಪಿಗಳಾಗಿದ್ದಾರೆ.
ಯಾವುದೇ ಪೋಷಕರನ್ನು ಭಯಭೀತಗೊಳಿಸುವ ಘಟನೆಯಲ್ಲಿ, ಉದ್ಯಮಿಯ ಇಬ್ಬರು ಮಕ್ಕಳು ಆಟವಾಡುತ್ತಿದ್ದಾಗ ಅವರ ಮನೆಯೊಳಗಿಂದಲೇ ಅಪಹರಿಸಿದ್ದಾರೆ. ಗುರುವಾರ ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ ಬಡಾವಣೆಯ ವಿಜಯ ದೇಸಾಯಿ ಎಂಬವರ ಮನೆಗೆ ನುಗ್ಗಿ ಅವರ 4 ಮತ್ತು 3 ವರ್ಷದ ಮಕ್ಕಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಇಬ್ಬರು ಪುರುಷರು ಮನೆಯೊಳಗೆ ನುಗ್ಗಿ ಮೂರು ಮತ್ತು ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಮಕ್ಕಳನ್ನು ಹೊರಗೆ ಕಾಯುತ್ತಿದ್ದ ಕಾಯುತ್ತಿದ್ದ ಕಾರಿನೊಳಗೆ ತಳ್ಳಿ ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ಅಪಹರಣಕಾರರು ಅವರ ಮನೆಗೆ ನುಗ್ಗುವ ಮೊದಲು ಇಬ್ಬರೂ ಮಕ್ಕಳು ಶಿಶುವಿಹಾರದಿಂದ ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ.
ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ ಮಾರ್ಗ ಮಧ್ಯದಲ್ಲಿ ಅಪಹರಣಕಾರರನ್ನು ಪೊಲೀಸರು ತಡೆಗಟ್ಟಿದ್ದರು. ಈ ವೇಳೆ, ದುಷ್ಕರ್ಮಿಗಳು ಪೊಲೀಸರು ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಹಾಗೂ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಲ್ಲಾಪುರ ಜಿಲ್ಲೆ ಹಾತ ಕಣಗಲಾ ಗ್ರಾಮದ ಸಂಬಾ ರಾವಸಾಬ ಕಾಂಬಳೆ ಎಂದು ಗುರುತಿಸಲಾಗಿದ್ದ, ಆತನನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗಾವಿ ಎಸ್​ಪಿ ಭೀಮಾಶಂಕರ ಗುಳೇದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಮೀರ್ ಡಾಂಗೆ ಹಾಗೂ ರಮೇಶ ಹಾದಿಮನಿ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಲಕರನ್ನು ಪೊಲೀಸರು ತಮ್ಮ ಮಡಿಗೆ ಒಪ್ಪಿಸಿದ್ದರಿಂದ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement