ಹಾವೇರಿ: ‘ನಕಲಿ ಸುದ್ದಿ’ ಹಬ್ಬಿಸಿದ ಆರೋಪದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಎರಡು ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ಮೇಲೂ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಪಹಣಿಯಲ್ಲಿ ವಕ್ಫ್ (Waqf) ಎಂದು ನಮೂದಾದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸಾಲಬಾಧೆಯಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಈ ಕಾರಣಕ್ಕೆ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
“ಹಾವೇರಿಯಲ್ಲಿ ರೈತರೊಬ್ಬರು ತಮ್ಮ ಭೂಮಿಯನ್ನು ವಕ್ಫ್ ಸ್ವಾಧೀನಪಡಿಸಿಕೊಂಡಿರುವುದನ್ನು ಕಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವ ತರಾತುರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ, ಅದು ದಿನದಿಂದ ದಿನಕ್ಕೆ ತಡೆಯಲು ಅಸಾಧ್ಯವಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ನಂತರ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಯನ್ನು ನಕಲಿ ಎಂದು ಹೇಳಿದ ನಂತರ ಸಂಸದರು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ರುದ್ರಪ್ಪ ಆತ್ಮಹತ್ಯೆ ಬಳಿಕ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸಿದ್ದರು. ತನಿಖೆಯಿಂದ ರುದ್ರಪ್ಪ ಸಾವಿಗೆ ಕಾರಣ ವಕ್ಫ್ ನೋಟೀಸ್ ಅಲ್ಲ, ಆತ ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಂತಿಮ ವರದಿಯನ್ನು ಹಾನಗಲ್ ತಹಶೀಲ್ದಾರ ಅವರಿಗೆ ಸಲ್ಲಿಸಿದ್ದಾರೆ. ಮೃತನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಹಾವೇರಿ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ