ಮೈಸೂರು: ಗ್ಯಾರಂಟಿಗಳ ಹೆಸರಲ್ಲಿ ರಾಜ್ಯ ಸರ್ಕಾರ ಕರ್ನಾಟಕವನ್ನು ಲೂಟಿ ಹೊಡೀತಿದೆ.. ರಕ್ಷಣೆ ಮಾಡಿ ಎಂದು ವ್ಯಕ್ತಿಯೊಬ್ಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಅವರಿಗೆ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಅವರೂ ವೇದಿಕೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ. `ಸಂಗೀತ ಸುಗಂಧ’ ಕಾರ್ಯಕ್ರಮದಲ್ಲಿ ದಿಢೀರ್ ವೇದಿಕೆ ಬಳಿಕ ನುಗ್ಗಿದ ವ್ಯಕ್ತಿಯೊಬ್ಬರು ಘೋಷಣೆ ಕೂಗಿದ್ದಾರೆ. ತಾಯಿ ಚಾಮುಂಡಿಗೆ ಹೂ ಹಾಕಿ ಲೂಟಿ ಹೊಡೆಯುತ್ತಿದ್ದಾರೆ. ನೀವು ಮಹಾರಾಷ್ಟ್ರ ಚುನಾವಣೆಯಲ್ಲಿ (Maharashtra Election) ದಯಮಾಡಿ ಉಚಿತ ಗ್ಯಾರಂಟಿ ಯೋಜನೆ ಘೋಷಣೆ ಮಾಡಬೇಡಿ ಎಂದು ಕೋರಿದ್ದಾರೆ.
ಮೈಸೂರಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಸಭಾಂಗಣದಲ್ಲಿ ಶುಕ್ರವಾರ ನಡೆದ ”ಮೈಸೂರು ಸಂಗೀತ ಸುಗಂಧ ಉತ್ಸವ” ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಂಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣವನ್ನು ಮುಗಿಸಿದ ಕೂಡಲೇ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವರು ದಿಢೀರ್ ಎದ್ದು ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ. ”ಯಾವುದೇ ಕಾರಣಕ್ಕೂ ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಬೇಡಿ” ಎಂದು ವೇದಿಕೆ ಮುಂಭಾಗದಲ್ಲಿ ಎದ್ದು ನಿಂತು ಕೂಗಿದ್ದಾರೆ. ವೇದಿಕೆಯ ಬಳಿಗೆ ಬಂದ ಆ ವ್ಯಕ್ತಿ ಸರ್ಕಾರದ ವಿರುದ್ಧ ತಮ್ಮ ವೇದನೆಯನ್ನು ಹೊರಹಾಕಿದರು. ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡಿದ ಈ ವ್ಯಕ್ತಿ, ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೋರಾಗಿ ಹೇಳಿದ್ದಾರೆ. ಇದರಿಂದಾಗಿ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ಕಾರ್ಯಕ್ರಮದಲ್ಲಿದ್ದ ಗಣ್ಯರೆಲ್ಲ ಕೆಲಕಾಲ ತಬ್ಬಿಬ್ಬಾದರು.
ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಮೈಸೂರು ಸಂಸದ ಯದುವೀರ ಒಡೆಯರ್ ಮೊದಲಾದವರಿದ್ದರು. ಘೋಷಣೆ ಕೂಗಿದ ವ್ಯಕ್ತಿಯನ್ನು ಪೊಲೀಸರು ಎಳೆದೊಯ್ದರು. ಬಳಿಕ ವ್ಯಕ್ತಿಯನ್ನು ಬಿಟ್ಟುಬಿಡಿ ಎಂದು ನಿರ್ಮಲಾ ಸೀತಾರಾಮನ್ ಸೂಚಿಸಿದರು ಈ ವೇಳೆ ಮಧ್ಯ ಪ್ರವೇಶಿಸಿದ ಕಾರ್ಯಕ್ರಮದ ಆಯೋಜಕರು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಹೊರಕ್ಕೆ ಕರೆದೊಯ್ದರು.
ಈ ವೇಳೆ ಕೇಂದ್ರ ಸಚಿವರು ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದರೂ ಕಾರ್ಯಪ್ರವೃತ್ತರಾದ ಜಯಲಕ್ಷ್ಮೀಪುರಂ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಈ ವ್ಯಕ್ತಿಯನ್ನು ಮೈಸೂರಿನ ಕೆ.ಆರ್. ನಗರ ತಾಲ್ಲೂಕಿನ ಸುಗ್ಗನಹಳ್ಳಿಯ ಹೊಟೇಲ್ ಕಾರ್ಮಿಕ ರವಿ ಎಂದು ಗುರುತಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ