ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಅನ್ನು ಏರಿ ಹಲವರ ಆತಂಕಕ್ಕೆ ಕಾಣವಾದ ಘಟನೆ ಭಾನುವಾರ ನಡೆದಿದೆ. ದೆಹಲಿ ಸಮೀಪದ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 113 ರಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಹೈಟೆನ್ಷನ್ ಟವರ್ ಅನ್ನು ಹತ್ತಿ ಅದರ ಮೇಲೆ ಡ್ಯಾನ್ಸ್ ಮಾಡಲು ಆರಂಭಿಸಿದ್ದ. ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ದಳ, ವಿದ್ಯುತ್ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಆಗಮಿಸಬೇಕಾಯಿತು.
ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡ ವೀಡಿಯೊ ಪ್ರಕಾರ, ವ್ಯಕ್ತಿ ಗೋಪುರದ ಮೇಲ್ಭಾಗದಲ್ಲಿ ನಿಂತು ನೃತ್ಯ ಮಾಡುವುದನ್ನು ಕಾಣಬಹುದು.
ನೋಯ್ಡಾ ಸೆಕ್ಟರ್ 113 ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರೋ ನಿಲ್ದಾಣದ ಬಳಿ ಇರುವ ವಿದ್ಯುತ್ ಹೈಟೆನ್ಶನ್ ಬಳಿ ಅಪಾರ ಜನರು ಜಮಾಯಿಸಿ ಕೆಳಗಿಳಿಯುವಂತೆ ಆತನ ಮನವೊಲಿಸಲು ಪ್ರಯತ್ನಿಸಿದರು.
ಎಬಿಪಿ ನ್ಯೂಸ್ ವರದಿ ಪ್ರಕಾರ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಎರಡು ಗಂಟೆಗಳ ಕಾಲ ಆತನೊಂದಿಗೆ ಮಾತನಾಡಿ ಮನವೊಲಿಸಿದ ನಂತರ ಆತ ಹೈಟೆನ್ಶನ್ ವಿದ್ಯುತ್ ಟವರ್‌ನಿಂದ ಕೆಳಗಿಳಿದಿದ್ದಾನೆ. ತಂತಿಗಳ ಸಂಪರ್ಕದಿಂದ ಆತ ಸ್ವಲ್ಪದರಲ್ಲೇ ಪಾರಾಗಿದ್ದು, ಅಪಾಯ ತಪ್ಪಿದೆ.
ಪೊಲೀಸರ ಪ್ರಕಾರ, ಆತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದಾನೆ. ಆದರೆ, ಆತ ಪಾನಮತ್ತನಾಗಿದ್ದ ಎಂಬುದು ಇನ್ನೂ ದೃಢಪಟ್ಟಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ