ಚೆನ್ನೈ: ಚೆನ್ನೈನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರಿಗೆ ವ್ಯಕ್ತಿಯೊಬ್ಬ ಅನೇಕ ಬಾರಿ ಚಾಕುವಿನಿಂದ ಇರಿದಿದ್ದು, ನಂತರ ಆತ ಯಾವುದೇ ಅಂಜಿಕೆಯಿಲ್ಲದೆ ಜನರ ಮುಂದೆಯೇ ಚಾಕುವನ್ನು ಎಸೆದು ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಜನರು ಎಚ್ಚರಿಸಿದ ನಂತರ ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ, ನಂತರ ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾರೆ.
ವೈದ್ಯರಿಗೆ ಚಾಕುವಿನಿಂದ ಇರಿದು ಆರೋಪಿ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಹೊರಬಿದ್ದಿದ್ದು, ಆರೋಪಿಯನ್ನು ನಂತರ ಭದ್ರತಾ ಸಿಬ್ಬಂದಿ ಹಿಡಿದಿರುವುದು ಕಂಡುಬರುತ್ತದೆ. ಆರೋಪಿಯನ್ನು ವಿಘ್ನೇಶ ಎಂದು ಗುರುತಿಸಲಾಗಿದ್ದು, ಆತ ಸರ್ಕಾರಿ ಕಲೈಂಕರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂಕೊಲಾಜಿಸ್ಟ್ ಮತ್ತು ಪ್ರಾಧ್ಯಾಪಕ ಡಾ.ಬಾಲಾಜಿ ಜಗನ್ನಾಥ್ ಅವರನ್ನು ಇರಿದ ನಂತರ ಅಲ್ಲಿಂದ ಹೊರಟು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಆತ ಇರಿತಕ್ಕೆ ಬಳಸಿದ ಚಾಕುವಿನ ರಕ್ತವನ್ನು ಒರೆಸಿದ ನಂತರ ಅದನ್ನು ಶಾಫ್ಟ್ ಪ್ರದೇಶಕ್ಕೆ ಎಸೆದಿದ್ದಾನೆ. ಈತನ ತಾಯಿ ಕ್ಯಾನ್ಸರ್ ರೋಗಿಯಾಗಿದ್ದು, ಆಕೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ವೈದ್ಯರಿಗೆ ಚಾಕುವಿನಿಂದ ಇರಿದ ಈತ ತನ್ನ ತಾಯಿಗೆ ವೈದ್ಯರು ತಪ್ಪು ಔಷಧಿಗಳನ್ನು ಬರೆದಿದ್ದಾರೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ, ದಾಳಿಕೋರನು ತನ್ನ ಜೇಬಿನಿಂದ ದಾಳಿಗೆ ಬಳಸಿದ ಚಾಕುವನ್ನು ಹೊರತೆಗೆದು ಅದನ್ನು ಎಸೆದು ಆರಾಮವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈಗಲಾದರೂ ಅವನನ್ನು ಹಿಡಿಯಿರಿ ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ನಿಮ್ಮ ತಾಯಿ ಅಥವಾ ತಂದೆಗೆ ತೊಂದರೆಯಾಗಿದ್ದರೆ ಏನು ಮಾಡಬೇಕೆಂದು ಆರೋಪಿ ಪ್ರಶ್ನಿಸುತ್ತಾನೆ. ಗಲಾಟೆ ಮತ್ತು ಕೂಗಾಟಗಳ ನಡುವೆ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದಿದ್ದಾರೆ. ನಂತರ ಗುಂಪು ಆತನಿಗೆ ಹೊಡೆಯಲು ಪ್ರಾರಂಭಿಸಿದಾಗ, ಒಬ್ಬ ಮಹಿಳೆ ಮಧ್ಯಪ್ರವೇಶಿಸಿ ಅವರನ್ನು ತಡೆಯುತ್ತಾಳೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ವರದಿಯ ಪ್ರಕಾರ, ಆಸ್ಪತ್ರೆಯ ಹೊರರೋಗಿ ವಿಭಾಗದ (OPD) ಒಳಗೆ ಈ ಘಟನೆ ಸಂಭವಿಸಿದೆ, ಆಸ್ಪತ್ರೆಯ ಉದ್ಯೋಗಿ ಎಂದು ಹೇಳಿಕೊಂಡಿದ್ದ ವಿಘ್ನೇಶ, ಡಾ. ಜಗನ್ನಾಥನ್ ಮೇಲೆ ಹಲ್ಲೆ ನಡೆಸಿದ್ದಾನೆ. ಡಾ. ಜಗನ್ನಾಥನ್ ಅವರ ಆರೈಕೆಯಲ್ಲಿದ್ದ ಕ್ಯಾನ್ಸರ್ ರೋಗಿಯ ತಾಯಿಗೆ ವೈದ್ಯರು ತಪ್ಪಾದ ಔಷಧಿಯನ್ನು ಬರೆದಿದ್ದಾರೆ ಎಂಬ ಅನುಮಾನದಿಂದ ವಿಘ್ನೇಶ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಅವರಿಗೆ ಪೇಸ್‌ಮೇಕರ್ ಅಳವಡಿಸಲಾಗಿದೆ. ಚಾಕು ಇರಿತದಿಂದ ಅವರ ಹಣೆ, ಬೆನ್ನು, ಕಿವಿಯ ಹಿಂಭಾಗ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಅವರು ಐಸಿಯುನಲ್ಲಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.
ಪೊಲೀಸರು ವಿಘ್ನೇಶ್ ನನ್ನು ಬಂಧಿಸಿದ್ದು, ದಾಳಿಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದೆ.
ಏತನ್ಮಧ್ಯೆ, ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ವಿಘ್ನೇಶ ತಾಯಿ, ನನ್ನ ಮಗ ವಿಘ್ನೇಶ ನನ್ನ ಮೇಲಿನ ಪ್ರೀತಿಯಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನ ಮಗನಿಗೆ ಹೃದಯ ತೊಂದರೆ ಮತ್ತು ಅಪಸ್ಮಾರವಿದೆ. ನನಗೆ 5ನೇ ಹಂತದ ಕ್ಯಾನ್ಸರ್ ಇದೆ ಎಂದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತನಿಖೆಗೆ ಆದೇಶಿಸಿದ್ದು, ಮುಂದೆ ಇಂತಹ ದಾಳಿ ನಡೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ವೈದ್ಯರ ಸೇವೆ ಶ್ಲಾಘನೀಯ… ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ… ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಗಸ್ಟ್‌ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ-ಕೊಲೆಯ ನಂತರ ಈ ಘಟನೆಯು ವೈದ್ಯರ ಸುರಕ್ಷತೆಯ ವಿಚಾರದಲ್ಲಿ ಮತ್ತೆ ಗಮನ ಸೆಳೆಯುವಂತೆ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ರಾಷ್ಟ್ರೀಯ ಕಾರ್ಯಪಡೆಯು ಈಗ ಕರ್ತವ್ಯದಲ್ಲಿರುವ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಶಿಫಾರಸು ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ