ಆಮ್‌ ಆದ್ಮಿ ಪಕ್ಷಕ್ಕೆ ಆಘಾತ ; ದೆಹಲಿ ಸಚಿವ ಸ್ಥಾನಕ್ಕೆ, ಎಎಪಿಗೆ ರಾಜೀನಾಮೆ ನೀಡಿದ ಹಿರಿಯ ನಾಯಕ ಕೈಲಾಶ ಗೆಹ್ಲೋಟ್‌

ನವದೆಹಲಿ: ಆಮ್‌ ಆದ್ಮಿ ಪಕ್ಷಕ್ಕೆ ಭಾರಿ ಆಘಾತಕಾರಿ ಬೆಳವಣಿಗೆಯಲ್ಲಿ ಹಿರಿಯ ನಾಯಕ ಹಾಗೂ ದೆಹಲಿಯ ಸರ್ಕಾರದಲ್ಲಿ ಸಚಿವರಾಗಿದ್ದ ಕೈಲಾಶ ಗಹ್ಲೋಟ್ ಅವರು ಭಾನುವಾರ ಸಚಿವ ಸ್ಥಾನಕ್ಕೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ರಾಜೀನಾಮೆ ನೀಡಿದ್ದಾರೆ.
“ಮುಜುಗರದ ಮತ್ತು ವಿಚಿತ್ರವಾದ ವಿವಾದಗಳು” ಮತ್ತು ನಾಗರಿಕರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಅರವಿಂದ ಕೇಜ್ರಿವಾಲ್ ಮತ್ತು ಅತಿಶಿ ಸರ್ಕಾರದ ವೈಫಲ್ಯದ ನಡುವೆ ತನಗೆ ರಾಜೀನಾಮೆ ಕೊಡದೆ ಬೇರೆ ದಾರಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ. .
ಕೈಲಾಶ ಗಹ್ಲೋಟ್ ಅವರು 2015 ರಿಂದ ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರದ ಸರ್ಕಾರದ ಭಾಗವಾಗಿದ್ದಾರೆ. ಅವರು ಪಕ್ಷಕ್ಕೆ ಮತ್ತು ಸಚಿವ ಸ್ಥಾನಕ್ಕೆ ನೀಡಿದ ತಮ್ಮ ಎರಡು ರಾಜೀನಾಮೆ ಪತ್ರಗಳನ್ನು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾನುವಾರ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ಗಹ್ಲೋಟ್ ಅವರು, ದೆಹಲಿಯ ಜನರಿಗೆ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸುವ ಮತ್ತು ಪ್ರತಿನಿಧಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

“ನಾನು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ನನ್ನ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ ಮತ್ತು ಅದನ್ನು ಮುಂದುವರಿಸಲು ನಾನು ಬಯಸುತ್ತೇನೆ. ಅದಕ್ಕಾಗಿಯೇ, ನಾನು ಎಎಪಿಯಿಂದ ಹೊರಗುಳಿಯುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ ಎಂದು ಕಂಡುಕೊಂಡಿದ್ದೇನೆ ಮತ್ತು ಆದ್ದರಿಂದ ನಾನು ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ, ”ಎಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಯಮುನಾ ನದಿ, ಶೀಶ್ ಮಹಲ್ ಉಲ್ಲೇಖ…
“ಉದಾಹರಣೆಗೆ ಯಮುನಾವನ್ನು ತೆಗೆದುಕೊಳ್ಳಿ, ನಾವು ಶುದ್ಧ ನದಿಯಾಗಿ ರೂಪಾಂತರಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ, ಆದರೆ ಅದನ್ನು ಮಾಡಲು ಎಂದಿಗೂ ಸಾಧ್ಯವಾಗಲಿಲ್ಲ, ಯಮುನಾ ನದಿಯು ಮೊದಲಿಗಿಂತ ಹೆಚ್ಚು ಕಲುಷಿತವಾಗಿದೆ ” ಎಂದು ಗಹ್ಲೋಟ್ ಹೇಳಿದ್ದಾರೆ.

ನಜಾಫ್‌ಗಢ್ ಶಾಸಕರಾದ ಕೈಲಾಶ ಗೆಹ್ಲೋಟ್‌, ‘ಶೀಶ್ ಮಹಲ್’ (ಕೇಜ್ರಿವಾಲ್ ಅವರ ಅವಧಿಯಲ್ಲಿ ನವೀಕರಿಸಿದ ಮುಖ್ಯಮಂತ್ರಿ ನಿವಾಸವನ್ನು ಉಲ್ಲೇಖಿಸಲು ಬಿಜೆಪಿ ಬಳಸುವ ಪದ) ನಂತಹ ಅನೇಕ “ಮುಜುಗರದ ಮತ್ತು ವಿಚಿತ್ರವಾದ ವಿವಾದಗಳು” ಇವೆ ಎಂದು ಹೇಳಿದ್ದಾರೆ. ಇವುಗಳು ಈಗ ಎಲ್ಲರೂ ನಾವು ಆಮ್ ಆದ್ಮಿ ಎಂದು ಅನುಮಾನಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.
“ಇನ್ನೊಂದು ನೋವಿನ ಅಂಶವೆಂದರೆ ನಾವು ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ನಮ್ಮದೇ ಆದ ರಾಜಕೀಯ ಕಾರ್ಯಸೂಚಿಗಾಗಿ ಮಾತ್ರ ಹೋರಾಡುತ್ತಿದ್ದೇವೆ. ಇದು ದೆಹಲಿಯ ಜನರಿಗೆ ಮೂಲಭೂತ ಸೇವೆಗಳನ್ನು ತಲುಪಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ಕುಂಠಿತಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಸರ್ಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದೊಂದಿಗೆ ಹೋರಾಡಿದರೆ ದೆಹಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಗಹ್ಲೋಟ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

“ಆದಾಗ್ಯೂ, ಅದೇ ಸಮಯದಲ್ಲಿ, ಇಂದು ಆಮ್ ಆದ್ಮಿ ಪಕ್ಷವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಎಎಪಿಗಾಗಿ ನಮ್ಮನ್ನು ಒಟ್ಟುಗೂಡಿಸಿದ ಮೌಲ್ಯಗಳು ಹಾಗೂ ಆಂತರಿಕ ಸವಾಲುಗಳಿವೆ. ರಾಜಕೀಯ ಮಹತ್ವಾಕಾಂಕ್ಷೆಗಳು ಜನರ ಮೇಲಿನ ನಮ್ಮ ಬದ್ಧತೆಯನ್ನು ಹಿಂದಿಕ್ಕಿವೆ, ಅನೇಕ ಭರವಸೆಗಳನ್ನು ಈಡೇರಿಸದೆ ಬಿಟ್ಟಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇನ್ನು ಕೆಲವೇ ವಾರಗಳಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಸ್ತುತ ದೆಹಲಿ ವಿಧಾನಸಭೆಯ ಅವಧಿ ಫೆಬ್ರವರಿ 2025 ರಲ್ಲಿ ಕೊನೆಗೊಳ್ಳುತ್ತದೆ. ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಬಂಡಾಯವೆದ್ದ ವಾರಗಳ ನಂತರ ಗಹ್ಲೋಟ್ ಅವರ ರಾಜೀನಾಮೆ ಬಂದಿದೆ.

ಎಎಪಿ ಪ್ರತಿಕ್ರಿಯೆ
ಎಎಪಿ ಶಾಸಕ ದುರ್ಗೇಶ ಪಾಠಕ್ ಅವರು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ಎದುರಿಸುತ್ತಿರುವ ಕಾರಣ ಗಹ್ಲೋಟ್ ಅವರು ಬಿಜೆಪಿಗೆ ಹೋಗಬೇಕಾಗಿದೆ ಎಂದು ಹೇಳಿದರು.
“ಕಳೆದ ಕೆಲವು ತಿಂಗಳುಗಳಲ್ಲಿ, ಕೈಲಾಶ ಅವರು ಪ್ರತಿದಿನ ಇಡಿ ಮತ್ತು ಐಟಿಯಿಂದ ದಾಳಿಗಳನ್ನು ಎದುರಿಸುತ್ತಿದ್ದರು. ಅವರಿಗೆ ಬೇರೆ ಆಯ್ಕೆ ಇರಲಿಲ್ಲ. ಬಿಜೆಪಿಗೆ ಹೋಗಬೇಕಿತ್ತು. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಇಂದು ಇ.ಡಿ. ಹಾಗೂ ಸಿಬಿಐ ನೆರವಿನೊಂದಿಗೆ ಅವರು ದೆಹಲಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಪಾಠಕ್ ಹೇಳಿದ್ದಾರೆ.
ಎಎಪಿ ಸಂಸದ ಸಂಜಯ ಸಿಂಗ್ ಅವರು, “ಬಿಜೆಪಿ ತನ್ನ ತಂತ್ರಗಳಲ್ಲಿ ಯಶಸ್ವಿಯಾಗಿದೆ ಮತ್ತು ಕೈಲಾಶ ಗಹ್ಲೋಟ್ ಅವರು ಇ.ಡಿ. ಮತ್ತು ಐಟಿಯಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಕೈಲಾಶ ಗೆಹ್ಲೋಟ್ ಅವರು ಬಿಜೆಪಿ ಸೇರುವ ಯಾವುದೇ ಯೋಜನೆ ಬಗ್ಗೆ ಇನ್ನೂ ಘೋಷಿಸಿಲ್ಲ.
ಗೃಹ ಮತ್ತು ಹಣಕಾಸು ಮುಂತಾದ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಕೈಲಾಶ ಗೆಹ್ಲೋಟ್ ಅವರಂತಹ ಹಿರಿಯ ಸಚಿವರ ರಾಜೀನಾಮೆಯಿಂದ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ದೊಡ್ಡ ಹಿನ್ನಡೆಯಾಗಬಹುದಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ‘ಜನರ ತೀರ್ಪಿನ ನಂತರವೇ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಅತಿಶಿ ಅವರು ಈಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement