ಮುರಿದುಬಿದ್ದ ಎ.ಆರ್‌. ರೆಹಮಾನ್‌ ದಾಂಪತ್ಯ ; ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ ಬಾನು

ಚೆನ್ನೈ : ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ತಾವು ಪತಿಯಿಂದ ಬೇರ್ಪಡುವುದಾಗಿ ಪ್ರಕಟಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ಅವರು ದಂಪತಿ ಬೇರ್ಪಟ್ಟ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
“ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ತಮ್ಮ ಪತಿ ಎ.ಆರ್. ರೆಹಮಾನ್‌ ಅವರಿಂದ ಬೇರ್ಪಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಇದ್ದರೂ, ಅವರ ನಡುವೆ ಆಗುವ ಮನಸ್ತಾಪಗಳು ಹಾಗೂ ಸಮಸ್ಯೆಗಳು ಇಬ್ಬರ ಮಧ್ಯೆ ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂದು ದಂಪತಿ ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ಕೂಡ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಕಾರಣದಿಂದ ಸಾಯಿರಾ ಅವರು ನೋವು ಹಾಗೂ ಸಂಕಟದಿಂದಲೇ ಬೇರ್ಪಡುವ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಲಾಗಿದೆ.

ಸಾಯಿರಾ ಅವರ ಈ ಸವಾಲಿನ ಸಮಯದಲ್ಲಿ ಅಭಿಮಾನಿಗಳು ತಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಬಯಸುತ್ತಾರೆ. ಏಕೆಂದರೆ, ಅವರೀಗ ತಮ್ಮ ಜೀವನದ ಅತ್ಯಂತ ಕಷ್ಟಕರ ಹಂತದಲ್ಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಸಾಯಿರಾ ಅವರು ಗುಜರಾತಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉತ್ತರ ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ ಬೆಳೆದವರಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಾದ ಖತೀಜಾ, ರಹೀಮಾ ಮತ್ತು ಮಗ ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
1995ರ ಮಾರ್ಚ್‌ 12 ರಂದು ಇವರಿಬ್ಬರ ವಿವಾಹ ನೆರವೇರಿತ್ತು. 29 ವರ್ಷಗಳ ಕಾಲ ಎ.ಆರ್‌. ರೆಹಮಾನ್‌ ಹಾಗೂ ಸಾಯಿರಾ ಜೊತೆಯಾಗಿ ಬದುಕಿದ್ದರು. ಎ.ಆರ್‌. ರೆಹಮಾನ್‌ ಪತ್ನಿ ಸಾಯಿರಾ ಬಾನು ಅವರೊಂದಿಗೆ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಅವರು ಏಕಾಂಗಿಯಾಗಿ ಭಾಗವಹಿಸುತ್ತಿದ್ದರು. 2024ರ ಜುಲೈನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹದ ವೇಳೆ ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement