ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್ಎ)ಯ ಹಡಗಿನಿಂದ ಬಂಧಿಸಲ್ಪಟ್ಟಿದ್ದ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ರಕ್ಷಿಸಿದೆ.
ನವೆಂಬರ್ 17 ರ ಭಾನುವಾರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಧ್ಯಾಹ್ನ ಮೀನುಗಾರಿಕೆ ರಹಿತ ವಲಯ (ಎನ್ಎಫ್ಜೆಡ್) ಬಳಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೀನುಗಾರಿಕಾ ದೋಣಿ (ಐಎಫ್ಬಿ)ಯಿಂದ ಕಳುಹಿಸಲಾದ ತೊಂದರೆಯಲ್ಲಿದ್ದೇವೆ ಎಂಬ ಸಂಕೇತವನ್ನು ಸ್ವೀಕರಿಸಿದ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗೆ ಇಳಿಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
“ಸರಿಸುಮಾರು ಮಧ್ಯಾಹ್ನ 15:30ಕ್ಕೆ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ (ICG) ಹಡಗು NFZ ಬಳಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೀನುಗಾರಿಕಾ ದೋಣಿಯಿಂದ ತೊಂದರೆಯ ಬಗ್ಗೆ ಕರೆಯನ್ನು ಸ್ವೀಕರಿಸಿತು. ಮತ್ತೊಂದು ಭಾರತೀಯ ಮೀನುಗಾರಿಕಾ ದೋಣಿ ಕಾಲ ಭೈರವವನ್ನು ಪಿಎಂಎಸ್ಎ ಹಡಗು ತಡೆಹಿಡಿದಿದೆ ಮತ್ತು ಹಡಗಿನಲ್ಲಿದ್ದ ಏಳು ಭಾರತೀಯ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಕರೆ ತಿಳಿಸಿದೆ.
ತಕ್ಷಣವೇ ಭಾರತೀಯ ಕೋಸಟ್ ಗಾರ್ಡ್ ಕಾರ್ಯಪ್ರವೃತ್ತವಾಯಿತು. ಪಾಕಿಸ್ತಾನದ ಪಿಎಂಎಸ್ಎ ಹಡಗು ಅಲ್ಲಿಂದ ಹಿಮ್ಮೆಟ್ಟಲು ಪ್ರಯತ್ನಿಸಿದರೂ, ಭಾರತೀಯ ಹಡಗು ಅದನ್ನು ತಡೆದಿದೆ. ಹಾಗೂ ಮೀನುಗಾರರನ್ನು ಬಿಡುಗಡೆ ಮಾಡಲು ಪಿಎಂಎಸ್ಎ ಹಡಗಿನ ಸಿಬ್ಬಂದಿಗೆ ತಿಳಿಸಿ, ಅದರಲ್ಲಿ ಯಶಸ್ವಿಯಾಗಿದೆ ಎಂದು ಐಸಿಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಸಹ ಹಂಚಿಕೊಂಡಿದೆ, ಪಾಕಿಸ್ತಾನದ ಜಲಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ಭಾರತೀಯ ಮೀನುಗಾರರನ್ನು ರಕ್ಷಿಸಲು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಹಡಗು ಅಗ್ರಿಮ್ ಪಾಕಿಸ್ತಾನದ ಹಡಗು ಪಿಎಂಎಸ್ಎ (PMSA) ನುಸ್ರತ್ ಅನ್ನು ಬೆನ್ನಟ್ಟುತ್ತಿರುವುದನ್ನು ತೋರಿಸುತ್ತದೆ.
ಅಧಿಕಾರಿಯ ಪ್ರಕಾರ, ಐಸಿಜಿ ಹಡಗು ಏಳು ಮೀನುಗಾರರನ್ನು ಸುರಕ್ಷಿತವಾಗಿ ಕರೆತಂದಿದೆ, ಅವರೆಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಕಂಡುಬಂದಿದೆ. ಆದರೆ, ಘಟನೆಯ ವೇಳೆ ಭಾರತೀಯ ಮೀನುಗಾರಿಕಾ ಬೋಟ್ ಕಾಲ ಭೈರವ ಹಾನಿಗೊಳಗಾಗಿ ಮುಳುಗಿದೆ ಎಂದು ವರದಿಯಾಗಿದೆ.
ಸೋಮವಾರ, ನವೆಂಬರ್ 18 ರಂದು, ಹಡಗು ಓಖಾ ಬಂದರಿಗೆ ಮರಳಿದೆ, ಅಲ್ಲಿ ಜಂಟಿ ತನಿಖೆಯನ್ನು ಪ್ರಾರಂಭಿಸಲಾಯಿತು.
ಐಸಿಜಿ, ರಾಜ್ಯ ಪೊಲೀಸ್, ಗುಪ್ತಚರ ಸಂಸ್ಥೆಗಳು ಮತ್ತು ಮೀನುಗಾರಿಕೆ ಅಧಿಕಾರಿಗಳ ಅಧಿಕಾರಿಗಳು ಈಗ ರಕ್ಷಣಾ ಕಾರ್ಯಾಚರಣೆಯ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ