ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ.
ಅವಘಡದಲ್ಲಿ ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಗಡಿಭಾಗವಾದ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿದ್ದ ಪಕ್ಷೇತರ ಅಭ್ಯರ್ಥಿ ಶಿವಾಜಿ ಪಾಟೀಲ ಅವರು ಶನಿವಾರ (ನವೆಂಬರ್ 23) ರಾತ್ರಿ ಮಹಾಗಾಂವ್‌ನಲ್ಲಿ ವಿಜಯೋತ್ಸವ ಆಚರಿಸುವ ಸಂದರರ್ಭದಲ್ಲಿ ವಾಹನದ ಮೂಲಕ ಗುಲಾಲು ಸುರಿಯಲಾಗಿದೆ. ಆಗ ದಿಢೀರನೆ ಬೃಹದಾಕಾರದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಭುಗಿಲೆದ್ದ ಬೆಂಕಿಯ ಕೆನ್ನಾಲಗಗೆ ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಚಂದಗಢದ ಮಹಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ಶಿವಾಜಿ ಪಾಟೀಲರಿಗೆ ‘ಆರತಿ’ ಬೆಳಗುತ್ತಿದ್ದಾಗ, ಕ್ರೇನ್‌ನಿಂದ ದೊಡ್ಡ ಪ್ರಮಾಣದ ‘ಗುಲಾಲು’ ಸುರಿಯಲಾಗಿದೆ ಎನ್ನಲಾಗಿದೆ. ಗುಲಾಲು ‘ಆರತಿ’ ಪ್ಲೇಟ್‌ಗಳ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿರಬಹುದು. ಅಲ್ಲದೆ, ಈ ವೇಳೆ ಪಟಾಕಿ ಸಿಡಿಸಿದ ಪರಿಣಾಮವೂ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಿವಾಜಿ ಪಾಟೀಲ ಅವರು ಚಂದಗಢದಲ್ಲಿ ಎನ್‌ಸಿಪಿಯ ರಾಜೇಶ ಪಾಟೀಲ ಅವರನ್ನು 24,134 ಮತಗಳಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಭಾರಿ ವಿಜಯೋತ್ಸವ ಆಚರಿಸಲಾಗುತ್ತಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ