ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಅಬ್ಬಾಸ್ ಎಂಬವರು ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ದೂರು ನೀಡಿದ್ದು, ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಆಗ್ರಹಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವಾಮೀಜಿಯ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತ 299ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಚಂದ್ರಶೇಖರನಾಥ ಸ್ವಾಮೀಜಿ ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು. ಬೇರೆಯವರ ಭೂಮಿಯನ್ನು ಕಸಿದುಕೊಳ್ಳುವುದು ಧರ್ಮವಲ್ಲ. ಮೊದಲು ವಕ್ಫ್ ಬೋರ್ಡ್ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು.
ಹೇಳಿಕೆಗೆ ವಿರುದ್ಧ ವಿಷಾದ ವ್ಯಕ್ತಪಡಿಸಿದ್ದ ಸ್ವಾಮೀಜಿ
ತಮ್ಮ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆದುಕೊಂಡಿದ್ದರಿಂದ ಚಂದ್ರಶೇಖರನಾಥ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ತಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ಹೃತ್ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ