ಬೆಂಗಳೂರು : ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ಚಿತ್ರನಟ ಜೈದ್ ಖಾನ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ ಪ್ರಕಾರ, ಚಿತ್ರತಂಡದ ಡ್ರೋನ್ ಟೆಕ್ನಿಷಿಯನ್ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಅವರ ತಾಯಿ ಸ್ಥಳೀಯರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದಕ್ಕೆ ಕಲ್ಟ್ ಚಿತ್ರದ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ ಮೇಲೆ ಕಾರಣ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
‘ಕಲ್ಟ್’ ಸಿನಿಮಾದ ಡ್ರೋನ್ ಚಿತ್ರೀಕರಣದ ದೃಶ್ಯಾವಳಿ ಪಡೆಯುವ ಸಂಬಂಧ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ ಸೇರಿದಂತೆ ಹಲವರು ಬೆದರಿಕೆ ಹಾಕಿದ್ದರು. ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡಿದ್ದರು. ಈ ಕಾರಣದಿಂದ ಮನನೊಂದು ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಸಂತೋಷ ದೂರು ಆಧರಿಸಿ ‘ಕಲ್ಟ್’ ಚಿತ್ರದ ನಿರ್ದೇಶಕ ಸೇರಿ ಇತರರ ವಿರುದ್ಧ ಬೆದರಿಕೆ ಆರೋಪದ ಅಂಸಜ್ಞೆಯ (ಎನ್‌ಸಿಆರ್) ದೂರು ದಾಖಲಿಸಲಾಗಿದೆ.
ನ.೨೫ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಚಿತ್ರೀಕರಣ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ ಅವರು ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಲವು ಸಿನಿಮಾಗಳಿಗೆ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿರುವ ಸಂತೋಷ 25 ಲಕ್ಷ ರೂ. ಸಾಲ ಮಾಡಿ ಡ್ರೋನ್ ಖರೀದಿಸಿದ್ದರು. ಡ್ರೋನ್‌ನಲ್ಲಿ ಸಿನಿಮಾ ಶೂಟಿಂಗ್‌ಗಾಗಿ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಲಾಗಿತ್ತು.
ನ.21ರಂದು ಚಿತ್ರೀಕರಣದ ವೇಳೆ ಡ್ರೋನ್ ಕೆಳಗೆ ಬಿದ್ದು ಒಡೆದು ಹೋಗಿದೆ. ಆಗ ಚಿತ್ರತಂಡ ಈವರೆಗೂ ಚಿತ್ರೀಕರಿಸಿರುವ ದೃಶ್ಯಾವಳಿಯ ಸ್ಯಾನ್ ಡಿಸ್ಕ್ ಕಾರ್ಡ್ ಕೊಡುವಂತೆ ಕೇಳಿದ್ದರು. ನೀಡುವುದು ಸ್ವಲ್ಪ ತಡವಾಗುತ್ತದೆ ಎಂದು ಸಂತೋಷ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಮಾರನೇ ದಿನ ಬೆಂಗಳೂರಿಗೆ ಬಂದಿದ್ದ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರು. 25 ಲಕ್ಷ ರೂ. ಮೌಲ್ಯದ ಡ್ರೋನ್ ಹಾಳಾಗಿದ್ದರೂ ಪರಿಹಾರ ನೀಡದೆ ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ