ವೀಡಿಯೊ..| ಅಮೃತಸರದ ಸ್ವರ್ಣ ಮಂದಿರದ ಬಳಿ ಮಾಜಿ ಡಿಸಿಎಂ ಸುಖ​ಬೀರ್​ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನ

ಚಂಡೀಗಢ: ಸಿಕ್ಖ್ ಧಾರ್ಮಿಕ ಸಂಸ್ಥೆ ಅಕಾಲ್‌ ತಖ್ತ್‌ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌(Sukhbir Singh Badal) ಮೇಲೆ ಬುಧವಾರ ಬೆಳಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಬಳಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ.
ಸ್ಥಳದಲ್ಲೇ ಇದ್ದ ಜನರಿಂದ ಶೂಟರ್ ಮೇಲೆ ಹಲ್ಲೆ ನಡೆದಿದೆ. ಸುಖಬೀರ್ ಸಿಂಗ್ ಬಾದಲ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರು ಎರಡು ದಿನಗಳಿಂದ ಅಕಾಲ್ ತಖ್ತ್ ಪ್ರಕಟಿಸಿರುವ ‘ತಂಖಾ’ (ಧಾರ್ಮಿಕ ಶಿಕ್ಷೆ) ಕರ್ತವ್ಯವನ್ನು ನಿರ್ವಹಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ಇಂದು, ಬುಧವಾರ ಬೆಳಗ್ಗೆ 9:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಾದಲ್‌ ಕುಳಿತಿದ್ದ ಕೆಲವೇ ಮೀಟರ್ ದೂರದಲ್ಲಿ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಈತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (BKI) ನ ಮಾಜಿ ಸದಸ್ಯ ನರೈನ್ ಸಿಂಗ್ ಚೌರಾ ಎಂದು ಹೇಳಲಾಗಿದೆ.

ಕಾಲು ಮುರಿತದಿಂದ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಬಾದಲ್ ಕಡೆಗೆ ಚೌರಾ ನಿಧಾನವಾಗಿ ನಡೆದುಕೊಂಡು ಹೋಗಿ ಆತನ ಜೇಬಿನಿಂದ ಬಂದೂಕನ್ನು ಹೊರತೆಗೆದು ಶೂಟ್ ಮಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಚೌರಾ ಎಂಬಾತ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಪ್ರಯತ್ನಿಸಿದಾಗ ಸಾಮಾನ್ಯ ಉಡುಪಿನಲ್ಲಿದ್ದ ಭದ್ರತಾ ಸಿಬ್ಬಂದಿ ಚೌರಾ ಗುಂಡು ಹಾರಿಸುವ ಮೊದಲು ಆತನನನು ಹಿಡಿದು ಎಳೆದಿದ್ದರಿಂದ ಗುಂಡು ಗೋಡೆಗೆ ಬಡಿದಿದೆ.
ಸಿಂಗ್‌ ಬಾದಲ್‌ ಅವರಿಗೆ ಸೋಮವಾರ ಶಿಕ್ಷೆ ಘೋಷಣೆಯಾಗಿತ್ತು. 2007-17ರವರೆಗೆ ಪಂಜಾಬ್‌ನ ಎಸ್‌ಎಡಿ ಸರ್ಕಾರವು ಸಿಖ್‌ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್‌ ತಖ್ತ್‌ ಆಗಸ್ಟ್‌ನಲ್ಲಿ ತೀರ್ಪು ಪ್ರಕಟಿಸಿತ್ತು.

ಕುತ್ತಿಗೆಗೆ ಫ‌ಲಕ, ಕೈಯಲ್ಲಿ ಈಟಿ ಹಿಡಿದ ಸುಖಬೀರ್‌ ಬಾದಲ್‌, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸಿದ್ದರು. ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್‌ ಸಿಂಗ್‌ ಮಜೀತಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು. ಇದೀಗ ಮರು ದಿನವೇ ಬಾದಲ್‌ ಹತ್ಯೆಗೆ ಯತ್ನಿಸಲಾಗಿದೆ.
ಪೊಲೀಸ್ ಅಧಿಕಾರಿಗಳಾದ ಜಸ್ಬೀರ್ ಸಿಂಗ್ ಮತ್ತು ಪರ್ಮಿಂದರ್ ಸಿಂಗ್ ಚೌರಾ ಹಾನಿಯಾಗದಂತೆ ತಡೆದಿದ್ದಾರೆ. ಚೌರಾನನ್ನು ಘಟನಾ ಸ್ಥಳದಲ್ಲಿ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿದವನನ್ನು ಅಮೃತಸರದಿಂದ ಸುಮಾರು 75 ಕಿಮೀ ದೂರದಲ್ಲಿರುವ ಗುರುದಾಸಪುರ ಜಿಲ್ಲೆಯ ನರೈನ್‌ ಸಿಂಗ್ ಎಂದು ಗುರುತಿಸಲಾಗಿದೆ. ಸ್ಥಳದ ದೃಶ್ಯಗಳು ಅವನು ನಿಧಾನವಾಗಿ ಗೇಟ್ ಸಮೀಪಿಸುತ್ತಿರುವುದನ್ನು ತೋರಿಸುತ್ತವೆ.

ನಂತರ ಆತ ಬಂದೂಕನ್ನು ಹೊರತೆಗೆದಿದ್ದಾನೆ. ಬಾದಲ್ ಬಳಿ ನಿಂತಿದ್ದ ಒಬ್ಬ ವ್ಯಕ್ತಿ ಆತನನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದ್ದಾನೆ ಮತ್ತು ಆತನ ಕೈಯನ್ನು ಹಿಡಿದಿದ್ದಾನೆ. ಆದರೆ ಹಾರಿದ ಗುಂಡು ಬಾದಲ್ ಮತ್ತು ಅವನ ಬಳಿ ಇರುವ ಇತರರಿಗೆ ಬಡಿಯವುದು ತಪ್ಪಿ ಗೋಡೆಗೆ ಅಪ್ಪಳಿಸುತ್ತದೆ. ದಾಳಿಕೋರನನ್ನು ಬಂಧಿಸಲಾಗಿದ್ದು, ಆಘಾತಕಾರಿ ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳಾದ ರಿಶ್ಪಾಲ್ ಸಿಂಗ್, ಜಸ್ಬೀರ್ ಮತ್ತು ಪರ್ಮಿಂದರ್ ಸಿಂಗ್ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು ಎಂದು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ಹೇಳಿದ್ದಾರೆ. “ನರೈನ್‌ ಸಿಂಗ್ ಅವರು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಘಟನೆಯನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲಾಗಿದೆ. ನಾನು ಶಾಂತಿಯನ್ನು ಕಾಪಾಡಲು ಜನರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement