ಮುಂಬೈ: ಮುಂಬೈನ ಆಜಾದ್ ಮೈದಾನದಲ್ಲಿ ನಾಳೆ ಗುರುವಾರ (ಡಿಸೆಂಬರ್ 5) ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ನಾಯಕತ್ವವು ಬುಧವಾರ ಮುಖ್ಯಮಂತ್ರಿ ಹುದ್ದೆಗೆ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಿದೆ, ಯಾರು ಉನ್ನತ ಹುದ್ದೆಯನ್ನು ಪಡೆಯುತ್ತಾರೆ ಎಂಬ ದೀರ್ಘಾವಧಿಯ ಕುತೂಹಲಕ್ಕೆ ಈ ಮೂಲಕ ತೆರೆ ಬಿದ್ದಿದೆ. ಅವರ ಹೆಸರನ್ನು ಹೊಸದಾಗಿ ಆಯ್ಕೆಯಾದ ಶಾಸಕರ ಮುಂದೆ ಪ್ರಸ್ತಾಪಿಸಲಾಯಿತು ಮತ್ತು ಅವರು ನುಮೋದನೆ ನೀಡುವ ಮೂಲಕ ಆಯ್ಕೆಯನ್ನು ಅಧಿಕೃತಗೊಳಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಭೂತಪೂರ್ವ ವಿಯಗಳಿಸಿದ ಎರಡು ವಾರಗಳ ನಂತರ ಮುಂಬೈನ ಆಜಾದ್ ಮೈದಾನದಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
ಫಡ್ನವೀಸ್ ಅವರು ಶಿವಸೇನಾ ಮುಖ್ಯಸ್ಥ ಏಕನಾಥ ಶಿಂಧೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಬಿಜೆಪಿ ಶಾಸಕರ ಸಭೆಯಲ್ಲಿ, ಫಡ್ನವೀಸ್ ಅವರು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಮಾತನಾಡಿದ ಅವರು, ಬಿಜೆಪಿಯ 132 ಶಾಸಕರ ಬೆಂಬಲವಿಲ್ಲದೆ ನಾನು ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರವು ಮಹಾರಾಷ್ಟ್ರದಲ್ಲಿ ಅಭಿವೃದ್ಧಿಯನ್ನು ತರುತ್ತದೆ ಎಂದು ಹೇಳಿದರು. ಪ್ರಧಾನಿಯವರ ‘ಏಕ್ ಹೇ ತೋ ಸೇಫ್ ಹೈ’ ಘೋಷಣೆಯಿಂದಾಗಿ ಮಹಾಯುತಿಯ ವಿಜಯವಾಗಿದೆ ಎಂದರು.
ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ ಮುಖಂಡರು ಶಿಂಧೆ ಅವರು ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮುನ್ನಡೆಸಿದರು ಮತ್ತು ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಒತ್ತಾಯಿಸಿದರು. ಆದರೆ ಬಿಜೆಪಿಯು ತಾನು ಸ್ಪರ್ಧಿಸಿದ್ದ 148 ಸ್ಥಾನಗಳ ಪೈಕಿ 132 ಸ್ಥಾನಗಳನ್ನು ಗೆದ್ದ ಬಿಜೆಪಿ ಈ ಬಾರಿ ಉನ್ನತ ಸ್ಥಾನ ತನಗೆ ನೀಡಬೇಕು ಎಂದು ಹೇಳಿತ್ತು. ಅಂತಿಮವಾಗಿ, ಶಿಂಧೆ ಅವರು ಸರ್ಕಾರ ರಚನೆಗೆ ಅಡ್ಡಿಯಾಗುವುದಿಲ್ಲ ಮತ್ತು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಸಾರ್ವಜನಿಕವಾಗಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ