
ಚೆನ್ನೈ: ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ತಮಿಳುನಾಡಿನ ಇತರ 10 ಜಿಲ್ಲೆಗಳಲ್ಲಿ ಇಂದು, ಗುರುವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೈಋತ್ಯ ಬಂಗಾಳ ಕೊಲ್ಲಿಯಲ್ಲಿ “ವಾಯುಭಾರ ಕುಸಿತ” ದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಚೆನ್ನೈ, ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ಪುದುಕ್ಕೊಟ್ಟೈ, ಕಡಲೂರು, ದಿಂಡಿಗಲ್, ರಾಮನಾಥಪುರಂ, ತಿರುವಾರೂರು, ರಾಣಿಪೇಟ್ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ ಎರಡು ದಿನಗಳು ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು “ಆರೆಂಜ್ ಅಲರ್ಟ್” ಘೋಷಿಸಲಾಗಿದ್ದು, ಆಂಧ್ರಪ್ರದೇಶದ ಕರಾವಳಿ, ಯಾನಂ, ರಾಯಲಸೀಮಾ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಗಾಗಿ “ಯೆಲ್ಲೋ ಅಲರ್ಟ್” ಘೋಷಿಸಲಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ಡಿಸೆಂಬರ್ 9 ರಂದು ಕಡಿಮೆ ಒತ್ತಡದ ಪ್ರದೇಶವು ಹೆಚ್ಚು ಕಂಡುಬಂದಿದೆ ಎಂದು ಐಎಂಡಿ (IMD) ತಿಳಿಸಿದೆ.
ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ತುರ್ತು ತಂಡಗಳನ್ನು ನಿಯೋಜಿಸಲಾಗಿದೆ. ಡಿಸೆಂಬರ್ 13 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ