ಒಟ್ಟಾವಾ: ಕೆನಡಾದಲ್ಲಿ ಸೋಮವಾರ (ಡಿ. 16) ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಅವರು ರಾಜೀನಾಮೆ ಸಲ್ಲಿಸಿದ್ದು, ಕೆನಡಾ ಚುನಾವಣೆ ಹೊಸ್ತಿಲಲ್ಲಿರುವಾಗ ಇದನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.
ಕ್ರಿಸ್ಟಿಯಾ ಫ್ರೀಲ್ಯಾಂಡ್ ಉಪಪ್ರಧಾನಿ ಹುದ್ದೆಯ ಜತೆಗೆ ಹಣಕಾಸು ಖಾತೆಯನ್ನೂ ಹೊಂದಿದ್ದರು. ಸಚಿವ ಸಂಪುಟದಲ್ಲಿ ಪ್ರಧಾನಿ ಟ್ರುಡೊ ಅವರ ನಿಕಟವರ್ತಿ ಎಂದು ಗುರುತಿಸಲಾಗಿದ್ದ ಫ್ರೀಲ್ಯಾಂಡ್ ಅವರು ಸಂಸತ್ತಿನಲ್ಲಿ ದೇಶದ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡುವ ಕೆಲವೇ ಗಂಟೆಗಳ ಮೊದಲು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜೀನಾಮೆ ಬಗ್ಗೆ ಪ್ರಕಟಿಸಿರುವ ಅವರು, “ಕಳೆದ ಹಲವು ವಾರಗಳಿಂದ, ನೀವು ಮತ್ತು ನಾನು ದೇಶಕ್ಕೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದೇವೆʼʼ ಎಂದು ಪ್ರಧಾನಿ ಟ್ರುಡೊ ಅವರನ್ನು ಉಲ್ಲೇಖಿಸಿ ಬರೆದ್ದಾರೆ. “ನಮ್ಮ ದೇಶ ಇಂದು ಗಂಭೀರ ಸವಾಲನ್ನು ಎದುರಿಸುತ್ತಿದೆ. ಅಮೆರಿಕದಲ್ಲಿ ಅಧಿಕಾರಕ್ಕೆ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಶೇ. 25ರಷ್ಟು ಸುಂಕದ ಬೆದರಿಕೆ ಸೇರಿದಂತೆ ಆಕ್ರಮಣಕಾರಿ ಆರ್ಥಿಕ ರಾಷ್ಟ್ರೀಯತೆಯ ನೀತಿಯನ್ನು ಅನುಸರಿಸುತ್ತಿದೆ. ನಾವು ಆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಹೇಳಿದ್ದಾರೆ.
56ರ ಹರೆಯದ ಫ್ರೀಲ್ಯಾಂಡ್ ಈ ಹಿಂದೆ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಮೆರಿಕಾ ಮತ್ತು ಮೆಕ್ಸಿಕೊದೊಂದಿಗೆ ಮುಕ್ತ ವ್ಯಾಪಾರ ಮಾತುಕತೆಗಳಲ್ಲಿ ಸಕ್ರಿಯಾವಗಿ ತಡಗಿಸಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ