ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ರಸ್ತೆ ಬದಿ ನಿಂತವರ ಮೇಲೆ ಲಾರಿ ಪಲ್ಟಿಯಾಗಿ ಇಬ್ಬರು ಇಂಜಿನಿಯರ್ ಸೇರಿ ಮೂವರು ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪ್ ಸಮೀಪದ ಡಾಲರ್ಸ್ ಕಾಲನಿ ಕ್ರಾಸ್ ಬಳಿ ಈ ದುರಂತ ನಡೆದಿದ್ದು, ಪಿಡಬ್ಲ್ಯುಡಿ ಇಲಾಖೆಯ ಜವಳಗೇರಾ ಉಪವಿಭಾಗದ ಕಿರಿಯ ಇಂಜಿನಿಯರ್ಗಳಾದ ಶಿವರಾಜ ಕರಿರಾಂಪುರ (29), ಮಲ್ಲಿಕಾರ್ಜುನ ಸರ್ಜಾಪುರ (29) ಮತ್ತು ಗುತ್ತಿಗೆ ಆಧಾರದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ (32) ಮೃತರು ಎಂದು ಗುರುತಿಸಲಾಗಿದೆ.
ಇವರು ಸೋಮವಾರ ಸಂಜೆ ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದಿದ್ದರು. ಅಲ್ಲಿ ಪಿಡಬ್ಲ್ಯೂಡಿ ಕ್ಯಾಂಪ್ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತ ನಿಂತುಕೊಂಡಿದ್ದರು. ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಕಡೆ ಬರುತ್ತಿದ್ದ ಭತ್ತದ ತೌಡಿನ ಚೀಲಗಳನ್ನು ತುಂಬಿಕೊಂಡಿದ್ದ ಲಾರಿಪಲ್ಟಿಯಾಗಿದೆ. ಆಗ ಲಾರಿಯಲ್ಲಿದ್ದ ಭತ್ತದ ಚೀಲಗಳು ಈ ಮೂವರ ಮೇಲೆ ಬಿದ್ದಿದೆ. ಆ ಚೀಲಗಳ ಅಡಿಯಲ್ಲಿ ಸಿಲುಕಿದ ಮೂವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಭತ್ತದ ಚೀಲಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಬಳಸಲಾಗಿದೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದು, ಅವರನ್ನು ಬಳ್ಳಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಗರ ಸಂಚಾರ ಠಾಣೆ ಪೊಲೀಸರು ದುರಂತ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ