ರಷ್ಯಾ ತನ್ನದೇ ಆದ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ ತಾಸ್ (TASS) ವರದಿ ಮಾಡಿದೆ. ಇದು ಕ್ಯಾನ್ಸರ್ ವಿರುದ್ಧದ ಎಂಆರ್‌ಎನ್‌ಎ (mRNA) ಲಸಿಕೆಯಾಗಿದ್ದು, ಇದನ್ನು 2025ರಿಂದ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾದ ಆರೋಗ್ಯ ಸಚಿವಾಲಯದ ರೇಡಿಯಾಲಜಿ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ರೇಡಿಯೊ ರೊಸ್ಸಿಯಾಗೆ ತಿಳಿಸಿದ್ದಾರೆ.
ಲಸಿಕೆಯನ್ನು ಹಲವಾರು ಸಂಶೋಧನಾ ಕೇಂದ್ರಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು 2025 ರ ಆರಂಭದಲ್ಲಿ ಸಾರ್ವಜನಿಕ ಬಳಕೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ಅವರು, ಕ್ಯಾನ್ಸರ್ ವಿರುದ್ಧ ದೇಶವು ತನ್ನದೇ ಆದ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಅದನ್ನು ಜನರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂದು ರಷ್ಯಾದ ತಾಸ್ (TASS) ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಅವರು, ಲಸಿಕೆಯ ಪೂರ್ವ-ವೈದ್ಯಕೀಯ ಪ್ರಯೋಗಗಳು ಇದು ಕ್ಯಾನ್ಸರ್ ಗಡ್ಡೆಯ ಬೆಳವಣಿಗೆ ಮತ್ತು ಸಂಭಾವ್ಯ ಮೆಟಾಸ್ಟೇಸ್‌ಗಳನ್ನು ನಿಗ್ರಹಿಸುತ್ತದೆ ಎಂದು ತೋರಿಸಿದೆ ಎಂದು ತಾಸ್ (TASS)ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಕ್ಯಾನ್ಸರಿಗೆ ಲಸಿಕೆಗಳನ್ನು ತಯಾರಿಸಲು ರಷ್ಯಾದ ವಿಜ್ಞಾನಿಗಳು ಹತ್ತಿರವಾಗಿದ್ದಾರೆ ಅದು ಶೀಘ್ರದಲ್ಲೇ ರೋಗಿಗಳಿಗೆ ಲಭ್ಯವಿರುತ್ತದೆ. “ನಾವು ಹೊಸ ಪೀಳಿಗೆಯ ಕ್ಯಾನ್ಸರ್ ಲಸಿಕೆಗಳು ಮತ್ತು ಇಮ್ಯುನೊಮಾಡ್ಯುಲೇಟರಿ ಔಷಧಿಗಳ ತಯಾರಿಕೆಗೆ ಬಹಳ ಹತ್ತಿರ ಬಂದಿದ್ದೇವೆ” ಎಂದು ಫೆಬ್ರವರಿಯಲ್ಲಿ ತಿಳಿಸಿದ್ದರು.
ಕ್ಯಾನ್ಸರ್ ವಿರುದ್ಧ ಎಂಆರ್‌ಎನ್‌ಎ (MRNA) ಲಸಿಕೆ ಹೇಗೆ ಕೆಲಸ ಮಾಡುತ್ತದೆ?
ಎಂಆರ್‌ಎನ್‌ಎ (MRNA) ಲಸಿಕೆಯು ಕ್ಯಾನ್ಸರ್ ಕೋಶಗಳಿಗೆ ಸಂಬಂಧಿಸಿದ ನಿರ್ದಿಷ್ಟ ಪ್ರೊಟೀನ್ ಅನ್ನು ಉತ್ಪಾದಿಸಲು ದೇಹದ ಜೀವಕೋಶಗಳಿಗೆ ಸೂಚಿಸಲು ಮೆಸೆಂಜರ್ ಆರ್‌ಎನ್‌ಎ (ಡಿಎನ್ಎಯಿಂದ ನಿರ್ದಿಷ್ಟ ಸೂಚನೆಗಳನ್ನು ಹೊಂದಿರುವ ಅಣು)ಯ ಸಣ್ಣ ತುಣುಕನ್ನು ಬಳಸುತ್ತದೆ. ಇದು ಆ ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ.
ಸಾಮಾನ್ಯವಾಗಿ ದುರ್ಬಲಗೊಂಡ ಅಥವಾ ನಿಷ್ಕ್ರಿಯಗೊಂಡ ರೋಗಕಾರಕಗಳನ್ನು ಬಳಸುವ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಎಂಆರ್‌ಎನ್‌ಎ (MRNA) ಲಸಿಕೆಗಳು ದೇಹದ ಸ್ವಂತ ಸೆಲ್ಯುಲಾರ್ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಮತ್ತು ಚಿಕಿತ್ಸೆ ನೀಡುತ್ತಿರುವ ಕ್ಯಾನ್ಸರಿಗೆ ಅನುಗುಣವಾಗಿ ನಿಖರವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ.
ಎಂಆರ್‌ಎನ್‌ಎ (mRNA) ಲಸಿಕೆ ಎಂದರೇನು?
ಎಂಆರ್‌ಎನ್‌ಎ (mRNA) ಅಥವಾ ಮೆಸೆಂಜರ್-RNA ಲಸಿಕೆಗಳು ಅದರ ಪ್ರೋಟೀನ್, ಸಕ್ಕರೆ ಅಥವಾ ಲೇಪನದಂತಹ ಸಾಂಕ್ರಾಮಿಕ ಏಜೆಂಟ್ ಗಳ ನಿರ್ದಿಷ್ಟ ಭಾಗಗಳನ್ನು ಬಳಸುತ್ತವೆ. ಎಂಆರ್‌ಎನ್‌ಎ (mRNA) ಲಸಿಕೆ ನಮ್ಮ ಜೀವಕೋಶಗಳಿಗೆ ಪ್ರೋಟೀನ್ ಅಥವಾ ವೈರಸ್ ಅಂತೆಯೇ ಇರುವ ಪ್ರೋಟೀನ್‌ನ ತುಂಡನ್ನು ಮಾಡಲು ಸಂದೇಶವನ್ನು ನೀಡುತ್ತದೆ. ಪ್ರೋಟೀನ್ ನಂತರ ನಮ್ಮ ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ.
ಜಾಗತಿಕ ಔಷಧ ಕಂಪನಿಗಳಾದ ಮಾಡೆರ್ನಾ (Moderna) ಮತ್ತು ಮೆರ್ಕ್ (Merck & Co) ಸಹ ಪ್ರಾಯೋಗಿಕವಾಗಿ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ