ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಬೋಗಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಆ ವ್ಯಕ್ತಿ ಸ್ವಲ್ಪ ಹೊತ್ತು ರೈಲಿನ ಬೋಗಿಯ ಕೈಕಂಬ ಹಿಡಿದುಕೊಂಡು ನಿಂತಿದ್ದ ಹಾಗೂ ಮಹಿಳೆಯರು ಚೀರಾಡಿದರೂ ಆತ ಅಲ್ಲಿಂದ ಹೊರಡಲು ಒಪ್ಪಲಿಲ್ಲ. ನಂತರ ಅವರನ್ನು ರೈಲ್ವೇ ಅಧಿಕಾರಿಯೊಬ್ಬರು ರೈಲಿನಿಂದ ಹೊರಗೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಎಸಿ ಲೋಕಲ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ (ಸಿಎಸ್‌ಎಂಟಿ) ಕಲ್ಯಾಣಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ
. ರೈಲ್ವೇ ಅಧಿಕಾರಿಗಳ ಪ್ರಕಾರ, ಮಾನಸಿಕವಾಗಿ ಅಸ್ಥಿರ ಎಂದು ನಂಬಲಾದ ಈ ವ್ಯಕ್ತಿ ಡಿಸೆಂಬರ್ 16 ರಂದು ಸಂಜೆ 4:11 ರ ಸುಮಾರಿಗೆ ಘಾಟ್ ಕೋಪರ್ ನಿಲ್ದಾಣದಲ್ಲಿ ಮಹಿಳೆಯರಿಗೆ ಮಾತ್ರ ನಿಗದಿಯಾಗಿದ್ದ ಬೋಗಿಯನ್ನು ಹತ್ತಿದ್ದಾನೆ.
ಮಹಿಳೆಯರು ಕೆಳಗಿಳಿಯುವಂತೆ ಒತ್ತಾಯಿಸಿದರೂ ಆತ ಕೆಳಗೆ ಇಳಿಯಲು ಒಪ್ಪಲಿಲ್ಲ. ಕೊನೆಗೆ ಅವರು ಸಹಾಯಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಕರೆದರು. ಆಗ ಮೋಟರ್‌ಮ್ಯಾನ್ ರೈಲನ್ನು ನಿಲ್ಲಿಸಿದ್ದಾನೆ. ಮತ್ತು ರೈಲ್ವೇಯ ಅಧಿಕಾರಿ ಅವನನ್ನು ಹೊರಗೆ ತಳ್ಳಿದ್ದಾರೆ.
ವೈರಲ್ ಆದ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಕಂಪಾರ್ಟ್‌ಮೆಂಟ್‌ನ ಬಾಗಿಲಿನ ಬಳಿ ನಿಂತಿರುವ ದೃಶ್ಯವನ್ನು ಕಾಣಬಹುದು. ಕೂಡಲೇ ಅಲ್ಲಿದ್ದ ಮಹಿಳೆಯರು ಕಿರುಚಾಡಿದ್ದಾರೆ. ಕೆಲ ಮಹಿಳೆಯರು ‘ಕೆಳಗೆ ಇಳಿ’ ಎಂದು ಕೂಗಿದರೆ, ಇನ್ನು ಕೆಲವರು ರೈಲಿನ ಕಿಟಕಿಗೆ ತಟ್ಟಿ ನಿಲ್ದಾಣದ ಅಧಿಕಾರಿಗಳ ಗಮನ ಸೆಳೆದರು.
ತಕ್ಷಣ ಬಂದ ಟಿಟಿಇ ಆ ವ್ಯಕ್ತಿಯನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ನಿಲ್ದಾಣದಲ್ಲಿದ್ದ ಸರ್ಕಾರಿ ರೈಲ್ವೇ ಪೊಲೀಸರು (ಜಿಆರ್‌ಪಿ) ತಕ್ಷಣ ಆತನನ್ನು ಬಂಧಿಸಿ, ಬಟ್ಟೆ ತೊಡಿಸಲು ಸಹಾಯ ಮಾಡಿ, ನಿಲ್ದಾಣದಿಂದ ಹೊರಗೆ ಕರೆದೊಯ್ದರು. ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಈ ಘಟನೆಯ ಬಗ್ಗೆ ಮಹಿಳಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಿನ ಭದ್ರತಾ ಕ್ರಮಗಳ ಬಗ್ಗೆ ಒತ್ತಾಯಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ರೈಲಿನಲ್ಲಿ ಆರ್‌ಪಿಎ ಸಿಬ್ಬಂದಿಗಳನ್ನು ನೇಮಿಸಿ ಎಂದು ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ