‌ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿಯಿಂದ 15,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿ ವಸೂಲಿ ಮಾಡಿದ ಇ.ಡಿ.

ನವದೆಹಲಿ: ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿದ್ದ ₹ 14,131 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದಾರೆ.
ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಯಂತಹ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು ₹ 22,280 ಕೋಟಿ ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸಿದೆ ಮತ್ತು ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದರು.

ಮರುಸ್ಥಾಪಿಸಲಾದ ಮೊತ್ತವು ನೀರವ್‌ ಮೋದಿಯ ₹ 1,052 ಕೋಟಿ ಮತ್ತು ಮೆಹುಲ್‌ ಚೋಕ್ಸಿಯ ₹ 2,565 ಕೋಟಿಗಳನ್ನು ಒಳಗೊಂಡಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ ಅಥವಾ ಎನ್‌ಎಸ್‌ಇಎಲ್‌ನಲ್ಲಿನ ₹ 17.5 ಕೋಟಿ ಮೊತ್ತವನ್ನು ಸಹ ಮರುಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
“ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ₹ 22,280 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಯಶಸ್ವಿಯಾಗಿ ಮರುಸ್ಥಾಪಿಸಿದೆ… ನಾವು ಯಾರನ್ನೂ ಬಿಟ್ಟಿಲ್ಲ. ಅವರು ದೇಶ ಬಿಟ್ಟು ಓಡಿ ಹೋದರೂ ನಾವು ಅವರ ಹಿಂದೆ ಹೋಗಿದ್ದೇವೆ. ಬ್ಯಾಂಕ್‌ಗಳಿಗೆ ಹಿಂತಿರುಗಬೇಕಾದ ಹಣವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ … ಹಿಂತಿರುಗಿಸುತ್ತೇವೆ” ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.
ವಿಜಯ ಮಲ್ಯ ಬ್ಯಾಂಕ್ ಸಾಲದ ಡೀಫಾಲ್ಟ್ ಪ್ರಕರಣದಲ್ಲಿ ಪ್ರಾಥಮಿಕ ಆರೋಪಿಯಾಗಿದ್ದಾರೆ ಹಾಗೂ 2016 ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾರೆ. ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಮಾಡಿದ್ದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement